ಸಿಡ್ನಿ: 2025-26ರ ಆಶಸ್(Ashes) ಸರಣಿಯಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ(australia vs england) ತಂಡಗಳು ಪರಸ್ಪರ ಸೆಣಸಾಡಲು ಸಜ್ಜಾಗಿದೆ. ಎರಡೂ ತಂಡಗಳು ಮಾರ್ಕ್ಯೂ ಸರಣಿಗೆ ಸಿದ್ಧತೆ ನಡೆಸುತ್ತಿವೆ. ನವೆಂಬರ್ 21 ರಂದು ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಆತಿಥೇಯ ತಂಡವು ಗಾಯದ ಭೀತಿಯಲ್ಲಿದೆ. ಮಂಡಿರಜ್ಜು ಗಾಯದಿಂದಾಗಿ ವೇಗಿ ಸೀನ್ ಅಬಾಟ್ ಮೊದಲ ಪಂದ್ಯದಿಂದ ಹೊರಬಿದಿದ್ದಾರೆ. ಆದರೆ ಜೋಶ್ ಹ್ಯಾಜಲ್‌ವುಡ್ ಲಭ್ಯರಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ಎಸ್‌ಸಿಜಿಯಲ್ಲಿ ನ್ಯೂ ಸೌತ್ ವೇಲ್ಸ್ ಮತ್ತು ವಿಕ್ಟೋರಿಯಾ ನಡುವಿನ ಪಂದ್ಯದ ಸಮಯದಲ್ಲಿ ಹ್ಯಾಜಲ್‌ವುಡ್ ಮತ್ತು ಅಬಾಟ್ ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು. ಮೊದಲ ಸೆಷನ್‌ನಲ್ಲಿ ಮೈದಾನವನ್ನು ತೊರೆದಿದ್ದ ಈ ಜೋಡಿ ಮೂರನೇ ದಿನದ ಊಟದ ನಂತರ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಆಶಸ್ ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿತ್ತು.
"ಪರ್ತ್ ಆಶಸ್ ಟೆಸ್ಟ್‌ನಲ್ಲಿ ಯೋಜಿಸಿದಂತೆ ಜೋಶ್ ಹ್ಯಾಜಲ್‌ವುಡ್ ಆಸ್ಟ್ರೇಲಿಯಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆದರೆ ಮತೋರ್ವ ವೇಗಿ ಸೀನ್ ಅಬಾಟ್ ಎಡ ಮಂಡಿರಜ್ಜು ನೋವಿನಿಂದ ಬಳಲುತ್ತಿದ್ದಾರೆ. ಸ್ಕ್ಯಾನ್‌ಗಳು ಮಧ್ಯಮ ದರ್ಜೆಯ ಮಂಡಿರಜ್ಜು ಗಾಯವನ್ನು ದೃಢಪಡಿಸಿದವು. ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಅವರು ಆಯ್ಕೆಗೆ ಲಭ್ಯವಿರುವುದಿಲ್ಲ ಮತ್ತು ಅವರು ಆಟಕ್ಕೆ ಮರಳುವ ಯೋಜನೆಯನ್ನು ಮುಂಬರುವ ವಾರಗಳಲ್ಲಿ ತಿಳಿಸಲಾಗುವುದು" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಧ್ಯಮ ಪ್ರಕಟಣೆ ಮೂಲಕ ಬುಧವಾರ ದೃಢಪಡಿಸಿದೆ.
ಏತನ್ಮಧ್ಯೆ, ನಾಯಕ ಪ್ಯಾಟ್ ಕಮ್ಮಿನ್ಸ್ ಡಿಸೆಂಬರ್ 4 ರಂದು ಗಬ್ಬಾದಲ್ಲಿ ಪ್ರಾರಂಭವಾಗುವ ಎರಡನೇ ಆಶಸ್ ಟೆಸ್ಟ್‌ಗೆ ಲಭ್ಯವಾಗುವ ಪ್ರಯತ್ನದಲ್ಲಿ ತಮ್ಮ ಫಿಟ್‌ನೆಸ್ ಕಾರ್ಯ ಮುಂದುವರಿಸಿದ್ದಾರೆ.
ಆಶಸ್ ಸರಣಿ ಬಗ್ಗೆ...
ಆಶಸ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಾಗಿದೆ. ಈ ಸರಣಿಗಳು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತವೆ, ಪ್ರತಿಯೊಂದು ತಂಡವು ತಮ್ಮ ತಮ್ಮ ಬೇಸಿಗೆಯಲ್ಲಿ ಸರಣಿಯನ್ನು ಆಯೋಜಿಸಲು ಸರದಿ ತೆಗೆದುಕೊಳ್ಳುತ್ತದೆ. ಪ್ರತಿಯೊಂದು ಪಂದ್ಯವು ಗರಿಷ್ಠ ಐದು ದಿನಗಳವರೆಗೆ ನಡೆಯಬಹುದು ಮತ್ತು ನಾಲ್ಕು ಫಲಿತಾಂಶಗಳನ್ನು ಪಡೆಯಬಹುದು ಆಸ್ಟ್ರೇಲಿಯಾ ಗೆಲುವು, ಇಂಗ್ಲೆಂಡ್ ಗೆಲುವು, ಡ್ರಾ ಮತ್ತು ಟೈ ಸಾಧ್ಯ. ಸರಣಿ ಡ್ರಾ ಆದರೆ ಆಸ್ಟ್ರೇಲಿಯಾ ಆಶಸ್ ಅನ್ನು ಉಳಿಸಿಕೊಳ್ಳುತ್ತದೆ ಏಕೆಂದರೆ ಅವರು ಪ್ರಸ್ತುತ ಚಾಂಪಿಯನ್ ಆಗಿದ್ದಾರೆ.
ಸರಣಿಯ ವೇಳಾಪಟ್ಟಿ
ಮೊದಲ ಟೆಸ್ಟ್: ನವೆಂಬರ್ 21-25(ಪರ್ತ್)
ಎರಡನೇ ಟೆಸ್ಟ್: ಡಿಸೆಂಬರ್ 4-8 (ಬ್ರಿಸ್ಬೇನ್)
ಮೂರನೇ ಟೆಸ್ಟ್: ಡಿಸೆಂಬರ್ 17-21 (ಅಡಿಲೇಡ್)
ನಾಲ್ಕನೇ ಟೆಸ್ಟ್: ಡಿಸೆಂಬರ್ 25-29 (ಮೆಲ್ಬೋರ್ನ್)
ಐದನೇ ಟೆಸ್ಟ್: ಜನವರಿ 3-7 (ಸಿಡ್ನಿ)