Saturday, 14th December 2024

AFG v NZ: ಕಿವೀಸ್‌-ಆಫ್ಘಾನ್‌ ಟೆಸ್ಟ್‌ ಪಂದ್ಯ ರದ್ದು

AFG v NZ

ಗ್ರೇಟರ್‌ ನೋಯ್ಡಾ: ಅಫಫ್ಘಾನಿಸ್ಥಾನ ಮತ್ತು ನ್ಯೂಜಿಲ್ಯಾಂಡ್‌(AFG v NZ) ನಡುವಿನ ಗ್ರೇಟರ್‌ ನೋಯ್ಡಾ ಟೆಸ್ಟ್‌ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಈ ಮೂಲಕ ಒಂದೂ ಎಸೆತ ಕಾಣದೆ ರದ್ದುಗೊಂಡ(abandoned Test) ಅಪರೂಪದ ಟೆಸ್ಟ್‌ ಪಂದ್ಯಗಳ ಸಾಲಿಗೆ ಈ ಪಂದ್ಯ ಸೇರ್ಪಡೆಯಾಗಿದೆ. ಇದು ಟೆಸ್ಟ್‌ ಕ್ರಿಕೆಟ್ ಇತಿಹಾಸದಲ್ಲಿ ಚೆಂಡು ಎಸೆಯಲಾಗದೆ ರದ್ದುಗೊಂಡ 8ನೇ ಟೆಸ್ಟ್ ಆಗಿದೆ. ಜತೆಗೆ 21ನೇ ಶತಮಾನದಲ್ಲಿ ಏಷ್ಯಾದಲ್ಲಿ ಮಳೆಯಿಂದಾಗಿ ರದ್ದಾದ ಮೊದಲ ಟೆಸ್ಟ್ ಪಂದ್ಯ.

ಏಕೈಕ ಟೆಸ್ಟ್‌ ಪಂದ್ಯದ ಮೊದಲ ದಿನ ಭಾರೀ ಮಳೆಯಿಂದ ರದ್ದುಗೊಂಡರೆ, ಹೊರ ಮೈದಾನ ಒದ್ದೆಯಾಗಿದ್ದರಿಂದ ಎರಡನೇ ದಿನವೂ ಆಟ ನಡೆಯಲಿಲ್ಲ. ಮೂರನೇ ಮತ್ತು ನಾಲ್ಕನೇ ದಿನ ಮತ್ತೆ ಮಳೆ ಅಡ್ಡಿಪಡಿಸಿತ್ತು. ಇಂದು(ಶುಕ್ರವಾರ) ಅಂತಿಮ ದಿನದಾಟವೂ ಕೂಡ ನಡೆಯುವ ಸಾಧ್ಯತೆ ಕಾಣದ ನಿಟ್ಟಿನಲ್ಲಿ ಅಂತಿಮವಾಗಿ ಅಂಪೈರ್‌ಗಳು ಪಂದ್ಯವನ್ನು ರದ್ದು ಎಂದು ಘೋಷಿಸಿದರು. ನ್ಯೂಜಿಲ್ಯಾಂಡ್‌ ಇನ್ನು 2 ಪಂದ್ಯಗಳ ಸರಣಿಗಾಗಿ ಶ್ರೀಲಂಕಾಕ್ಕೆ ಪಯಣಿಸಲಿದೆ. ಅನಂತರ 3 ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಭಾರತಕ್ಕೆ ಆಗಮಿಸಲಿದೆ.

ಇದನ್ನೂ ಓದಿ IND vs BNG: ಚೆನ್ನೈಗೆ ಆಗಮಿಸಿದ ಟೀಮ್‌ ಇಂಡಿಯಾ

ಒಂದೂ ಎಸೆತ ಕಾಣದೆ ಟೆಸ್ಟ್‌ ಪಂದ್ಯವೊಂದು ರದ್ದುಗೊಂಡ 8ನೇ ನಿದರ್ಶನ ಇದಾಗಿದೆ. ಮೊತ್ತ ಮೊದಲ ಬಾರಿಗೆ ಟೆಸ್ಟ್‌ ಪಂದ್ಯ ರದ್ದುಗೊಂಡದ್ದು 1890 ರಲ್ಲಿ. ಇದಾದ ಬಳಿಕ 1938 ಮತ್ತು 1970 ರಲ್ಲಿ. ಈ ಮೂರು ಟೆಸ್ಟ್‌ ಪಂದ್ಯಗಳು ಕೂಡ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆ್ಯಶಸ್‌ ಸರಣಿಯ ಪಂದ್ಯಗಳಾಗಿದ್ದವು. ಇತರ ನಾಲ್ಕು ನಿದರ್ಶನಗಳು 1989 ಮತ್ತು 1998 ರ ನಡುವೆ ಸಂಭವಿಸಿದ್ದವು.

ಬಿಸಿಸಿಐ ಟೆಸ್ಟ್‌ ಆಯೋಜನೆಗೆ ಕಾನ್ಪುರ, ಬೆಂಗಳೂರು ಮತ್ತು ನೋಯ್ಡಾವನ್ನು ಆಯ್ಕೆಯಾಗಿ ನೀಡಿತ್ತು. ಆದರೆ, ಲಾಜಿಸ್ಟಿಕ್‌ ಕಾರಣದಿಂದ ಅಫಘಾನಿಸ್ತಾನ ಕ್ರಿಕೆಟ್‌ ಮಂಡಳಿ ನೋಯ್ಡಾವನ್ನು ಆಯ್ಕೆ ಮಾಡಿತ್ತು. 2016 ರಿಂದ ಇದುವರೆಗೆ 11 ಸೀಮಿತ ಓವರ್‌ಗಳ ಪಂದ್ಯಕ್ಕೆ ಇದೇ ಮೈದಾನವನ್ನು ಅಫಘಾನಿಸ್ತಾನ ಕ್ರಿಕೆಟ್‌ ಮಂಡಳಿ ತನ್ನ ತವರು ಮೈದಾನವಾಗಿ ಬಳಸಿಕೊಂಡಿತ್ತು.