ಭಾನುವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 13ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ ಅಫ್ಘಾನಿಸ್ತಾನ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ. ಆಫ್ಘಾನಿಸ್ತಾನ ನೀಡಿದ್ದ 285 ರನ್ ಗಳ ಸವಾಲಿನ ಗುರಿಯ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ರಷೀದ್ ಖಾನ್ ರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 40.3 ಓವರ್ ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 215 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಆ ಮೂಲಕ 69ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಆ ಮೂಲಕ ಬಲಿಷ್ಠ ಇಂಗ್ಲೆಂಡ್ ತಂಡ ವನ್ನು ದುರ್ಬಲ ಎನಿಸಿದ್ದ ಅಫ್ಘಾನಿಸ್ತಾನ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದೆ.
ಅಫ್ಘಾನಿಸ್ತಾನ ತಂಡಕ್ಕೆ ಏಕದಿನ ವಿಶ್ವಕಪ್ನಲ್ಲಿ ಎರಡನೇ ಗೆಲುವು ಇದಾಗಿದೆ. ವಿವರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ರಹಮಾನುಲ್ಲಾ ಗುರ್ಬಾಜ್ ಮತ್ತು ಇಕ್ರಮ್ ಅಲಿಖಿಲ್ ಅವರ ಅರ್ಧಶತಕದ ನೆರವಿನಿಂದ 49.5 ಓವರ್ಗಳಲ್ಲಿ 284 ರನ್ಗಳಿಗೆ ಸರ್ವಪತನ ಕಂಡಿತು.
ಆಫ್ಘಾನಿಸ್ತಾನ ಪರ ರಷೀದ್ ಖಾನ್ ಮತ್ತು ಮುಜೀಬ್ ಉರ್ ರೆಹಮಾನ್ ತಲಾ 3 ವಿಕೆಟ್ ಪಡೆದರೆ, ಮಹಮದ್ ನಬಿ 2 ಮತ್ತು ಫಜಲ್ಹಕ್ ಫಾರೂಕಿ ಮತ್ತು ನವೀನ್ ಉಲ್ ಹಕ್ ತಲಾ 1 ವಿಕೆಟ್ ಪಡೆದರು. ಅಂತೆಯೇ 3 ವಿಕೆಟ್ ಪಡೆದು ಇಂಗ್ಲೆಂಡ್ ತಂಡದ ಪತನಕ್ಕೆ ಕಾರಣರಾದ ಮುಜೀಬ್ ಉರ್ ರೆಹಮಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.