Wednesday, 11th December 2024

Ajinkya Rahane: ಕೌಂಟಿಯಲ್ಲಿ ಚೊಚ್ಚಲ ಶತಕ ಬಾರಿಸಿದ ರಹಾನೆ; ಬಾಂಗ್ಲಾ ಸರಣಿಗೆ ಆಯ್ಕೆ ಸಾಧ್ಯತೆ

Ajinkya Rahane

ಲಂಡನ್‌: ಟೀಮ್​ ಇಂಡಿಯಾದ ಟೆಸ್ಟ್​ ಸ್ಪೆಷಲಿಸ್ಟ್‌ ಅಜಿಂಕ್ಯ ರಹಾನೆ(Ajinkya Rahane) ಅವರು ಕೌಂಟಿ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದಾರೆ. ಅವರ ಈ ಉಪಯುಕ್ತ ಬ್ಯಾಟಿಂಗ್‌ ನೆರವಿನಿಂದ ಲೀಸೆಸ್ಟರ್‌ಶೈರ್ ತಂಡ ಶೋಲಿನಿ ಭೀತಿಯಿಂದ ಪಾರಾಗಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು.  36ರ ಹರೆಯದ ರಹಾನೆ ಅವರು ವಿಯಾನ್‌ ಮುಲ್ಡರ್‌ ಸ್ಥಾನಕ್ಕೆ ಬದಲಿ ಆಟಗಾರನಾಗಿ ಲೀಸೆಸ್ಟರ್‌ಶೈರ್‌ ತಂಡವನ್ನು ಸೇರಿಕೊಂಡಿದ್ದರು. ಇದೀಗ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ರಹಾನೆ, ಸೆಪ್ಟೆಂಬರ್‌ 19ರಿಂದ ಆರಂಭವಾಗಲಿರುವ ಬಾಂಗ್ಲಾ ವಿರುದ್ಧದ ತವರಿನ ಟೆಸ್ಟ್‌ ಸರಣಿಯಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ರಹಾನೆ ಭಾರತ ಪರ ಕೊನೆಯ ಟೆಸ್ಟ್​ ಪಂದ್ಯ ಆಡಿದ್ದು 2023ರ ವಿಂಡೀಸ್​ ಪ್ರವಾಸದಲ್ಲಿ ಇದಾದ ಬಳಿಕ ಅವರಿಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ.

299 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಲೀಸೆಸ್ಟರ್‌ಶೈರ್‌ ತಂಡ 74 ರನ್​ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಕ್ರೀಸ್‌ಗಿಳಿದ ರಹಾನೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾದರು.

192 ಎಸೆತ ಎದುರಿಸಿದ ರಹಾನೆ 13 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 102 ರನ್ ಬಾರಿಸಿದರು. ಇವರಿಗೆ ಪೀಟರ್ ಹ್ಯಾಂಡ್ಸ್​ಕೋಬ್​ (139) ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ಲೀಸೆಸ್ಟರ್​ಶೈರ್ ತಂಡವು 6 ವಿಕೆಟ್ ಕಳೆದುಕೊಂಡು 369 ರನ್ ಕಲೆಹಾಕಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

https://x.com/leicsccc/status/1830209665202037059

ರಹಾನೆ ಭಾರತ ಪರ 85 ಟೆಸ್ಟ್​ ಪಂದ್ಯಗಳನ್ನಾಡಿ 5077 ರನ್​ ಬಾರಿಸಿದ್ದಾರೆ. 12 ಶತಕ ಬಾರಿಸಿದ್ದಾರೆ. 2016ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 188 ರನ್‌ ಪೇರಿಸಿರುವುದು ಅವರ ವೈಯಕ್ತಿಕ ಶ್ರೇಷ್ಠ ಇನಿಂಗ್ಸ್‌ ಆಗಿದೆ. ಈ ಹಿಂದೆ ಆಸ್ಟ್ರೇಲಿಯ ನೆಲದಲ್ಲಿ ಭಾರತ 36 ರನ್​ಗೆ ಕುಸಿದು ಮುಖಭಂಗ ಅನುಭವಿಸಿದ್ದ ಸಂದರ್ಭದಲ್ಲಿ ಹಂಗಾಮಿಯಾಗಿ ತಂಡದ ನಾಯಕತ್ವ ವಹಿಸಿದ ರಹಾನೆ ಮುಂದಿನ ಪಂದ್ಯದಲ್ಲಿ ಶತಕ ಬಾರಿಸಿ ತಂಡವನ್ನು ಗೆಲುವಿನ ಹಾದಿಗೆ ತಂದು ಬಳಿಕ ಐತಿಹಾಸಿಕ ಸರಣಿ ಗೆಲುವು ತಂದಿತ್ತ ಖ್ಯಾತಿಯನ್ನು ಹೊಂದಿದ್ದಾರೆ.