Wednesday, 11th December 2024

Ajinkya Rahane: ನ್ಯೂಜಿಲ್ಯಾಂಡ್‌ ಟೆಸ್ಟ್‌ ಸರಣಿಗೆ ರಹಾನೆ ಆಯ್ಕೆ ಸಾಧ್ಯತೆ

Ajinkya Rahane

ಮುಂಬಯಿ: ಇರಾನಿ ಕಪ್‌ನಲ್ಲಿ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನ ತೋರಿದ ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರ, ಟೆಸ್ಟ್‌ ಸ್ಪೆಷಲಿಸ್ಟ್‌ ಅಜಿಂಕ್ಯ ರಹಾನೆ(Ajinkya Rahane) ಮತ್ತೆ ಭಾರತ ಟೆಸ್ಟ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಸಾಧ್ಯತೆ ಇದೆ. ಇದೇ ತಿಂಗಳು ಆರಂಭಗೊಳ್ಳಲಿರುವ ನ್ಯೂಜಿಲ್ಯಾಂಡ್‌(india vs new zealand test) ವಿರುದ್ಧದ ಟೆಸ್ಟ್‌ ಸರಣಿಗೆ ರಹಾನೆಯನ್ನು ಆಯ್ಕೆ ಮಾಡಲು ಬಿಸಿಸಿಐ ಯೋಚಿಸಿದೆ ಎಂದು ವರದಿಯಾಗಿದೆ.

ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ರಹಾನೆ ಆಸೀಸ್‌ ನೆಲದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯ ನೆಲದಲ್ಲಿ ಭಾರತ 36 ರನ್​ಗೆ ಕುಸಿದು ಮುಖಭಂಗ ಅನುಭವಿಸಿದ್ದ ಸಂದರ್ಭದಲ್ಲಿ ಹಂಗಾಮಿಯಾಗಿ ತಂಡದ ನಾಯಕತ್ವ ವಹಿಸಿದ ರಹಾನೆ ಮುಂದಿನ ಪಂದ್ಯದಲ್ಲಿ ಶತಕ ಬಾರಿಸಿ ತಂಡವನ್ನು ಗೆಲುವಿನ ಹಾದಿಗೆ ತಂದು, ಬಳಿಕ ಐತಿಹಾಸಿಕ ಸರಣಿ ಗೆಲುವು ಸಾಧಿಸಿದ್ದರು.

ಭಾರತದ ಪಿಚ್‌ನಲ್ಲಿ ಆಡಿದಂತೆ ಆಸೀಸ್‌ ಪಿಚ್‌ಗಳಲ್ಲಿ ಆಡುವುದು ಅಷ್ಟು ಸುಲಭವಲ್ಲ. ಹೀಗಾಗಿ ಅನುಭವಿ ರಹಾನೆಯನ್ನು ಕಿವೀಸ್‌ ವಿರುದ್ಧದ ಸರಣಿ ಆಡಿಸಿ ಆಸೀಸ್‌ ಸರಣಿಗೆ ರೆಡಿ ಮಾಡುವುದು ಬಿಸಿಸಿಐ ಯೋಜನೆಯಾಗಿದೆ. ರಹಾನೆ ನಾಯಕತ್ವದಲ್ಲಿ ಮುಂಬೈ ತಂಡ 27 ವರ್ಷಗಳ ಬಳಿಕ ಇರಾನಿ ಕಪ್‌ ಗೆದ್ದ ಸಾಧನೆ ಮಾಡಿತ್ತು. ಇದೇ ವರ್ಷ ಲಂಡನ್‌ನಲ್ಲಿ ನಡೆದಿದ್ದ ಕೌಂಟಿ ಕ್ರಿಕೆಟ್‌ನಲ್ಲಿಯೂ ರಹಾನೆ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು.

36ರ ಹರೆಯದ ರಹಾನೆ ಭಾರತ ಪರ ಕೊನೆಯ ಟೆಸ್ಟ್​ ಪಂದ್ಯ ಆಡಿದ್ದು 2023ರ ವಿಂಡೀಸ್​ ಪ್ರವಾಸದಲ್ಲಿ ಇದಾದ ಬಳಿಕ ಅವರಿಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ರಹಾನೆ ಭಾರತ ಪರ 85 ಟೆಸ್ಟ್​ ಪಂದ್ಯಗಳನ್ನಾಡಿ 5077 ರನ್​ ಬಾರಿಸಿದ್ದಾರೆ. 12 ಶತಕ ಬಾರಿಸಿದ್ದಾರೆ. 2016ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 188 ರನ್‌ ಪೇರಿಸಿದ್ದು ಅವರ ವೈಯಕ್ತಿಕ ಶ್ರೇಷ್ಠ ಇನಿಂಗ್ಸ್‌ ಆಗಿದೆ. 2 ಬಾರಿಯ ಟೆಸ್ಟ್‌ ವಿಶ್ವಕಪ್‌ ಟೂರ್ನಿಯಲ್ಲಿಯೂ ರಹಾನೆ ಆಡಿದ್ದರು.

ಇದನ್ನೂ ಓದಿ Irani Trophy: ಮುಂಬಯಿ ತಂಡಕ್ಕೆ ರಹಾನೆ ನಾಯಕ

ಪ್ರವಾಸಿ ನ್ಯೂಜಿಲ್ಯಾಂಡ್‌(IND vs NZ) ಮತ್ತು ಭಾರತ ನಡುವಣ ಟೆಸ್ಟ್‌ ಸರಣಿ ಅ.16ರಿಂದ ಆರಂಭಗೊಳ್ಳಲಿದೆ. ಈ ಪಂದ್ಯ ನಗರದ ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಈ ಪಂದ್ಯದ ಆನ್‌ಲೂನ್‌ ಟಿಕೆಟ್‌ಗನ್ನು ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಮಾರಾಟ ಮಾಡಿದೆ. ಟಿಕೆಟ್‌ಗೆ ಕನಿಷ್ಠ 600, ಗರಿಷ್ಠ 7500 ದರ ನಿಗದಿಪಡಿಸಲಾಗಿದೆ.

ನ್ಯೂಜಿಲ್ಯಾಂಡ್‌ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ ಕ್ಲೀನ್‌ ಸ್ವೀಪ್‌ ಮಾಡಿದರೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಫೈನಲ್‌ ಸ್ಥಾನ ಬಹುತೇಕ ಖಾತ್ರಿಯಾಗಲಿದೆ. ಫೈನಲ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಕಿವೀಸ್‌ಗೆ ಸರಣಿ ಗೆಲ್ಲಲೇ ಬೇಕಾದ ಒತ್ತಡವಿದೆ. ಹೀಗಾಗಿ ಈ ಟೆಸ್ಟ್‌ ಸರಣಿ ಇತ್ತಂಡಗಳಿಗೂ ಬಹಳ ಪ್ರಾಮುಖ್ಯತೆ ಪಡೆದಿದೆ.