ಚೆನ್ನೈ: ಬಾಂಗ್ಲಾದೇಶದೆದುರಿನ ಮೊದಲ ಪಂದ್ಯಕ್ಕಾಗಿ ಭಾರತ ತಂಡದ ಆಟಗಾರರು ಚೆನ್ನೈಯ ಸುಡು ಬಿಸಿಲನ್ನು ಲೆಕ್ಕಿಸದೆ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಭಾನುವಾರ ಚೆನ್ನೈಗೆ ಆಗಮಿಸಿದ್ದ ಬಾಂಗ್ಲಾ ಆಟಗಾರರು ಕೂಡ ಸೋಮವಾರ ಅಭ್ಯಾಸ ನಡೆಸಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನವೇ ಯುವ ವೇಗಿ ಆಕಾಶ್ ದೀಪ್(Akash Deep) ಅವರು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯಿಂದ(Virat Kohli) ಅಮೂಲ್ಯವಾದ ಉಡುಗೊರೆಯೊಂದನ್ನು ಪಡೆದಿದ್ದಾರೆ. ಇದರ ಫೋಟೊವನ್ನು ಆಕಾಶ್ ದೀಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರು ಆಕಾಶ್ ದೀಪ್‌ಗೆ ತಮ್ಮ ಬ್ಯಾಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಕೊಹ್ಲಿ ನೀಡಿದ ಬ್ಯಾಟ್‌ನ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಆಕಾಶ್ ದೀಪ್, ʼಧನ್ಯವಾದಗಳು ಸಹೋದರʼ ಎಂದು ಬರೆದುಕೊಂಡಿದ್ದಾರೆ. ಆಕಾಶ್ ದೀಪ್ ಅವರು ಐಪಿಎಲ್ನಲ್ಲಿ ಆರ್‌ಸಿಬಿ ತಂಡದ ಆಟಗಾರನಾಗಿದ್ದಾರೆ. ಕೊಹ್ಲಿ ಜತೆ ಉತ್ತಮ ಬಾಂಧವ್ಯ ಕೂಡ ಹೊಂದಿದ್ದಾರೆ. ಕೊಹ್ಲಿ ಈ ಹಿಂದೆ ರಿಂಕು ಸಿಂಗ್ ಅವರಿಗೂ ತಮ್ಮ ಬ್ಯಾಟ್ ಉಡುಗೊರೆಯಾಗಿ ನೀಡಿದ್ದರು.
ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಆಕಾಶ್ ದೀಪ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಅವರು ಒಟ್ಟು ಮೂರು ವಿಕೆಟ್ ಕಿತ್ತು ಮಿಂಚಿದ್ದರು. ಇಂಗ್ಲೆಂಡ್ ಆರಂಭಿಕರಾದ ಬೆನ್ ಡಕೆಟ್, ಝಾಕ್ ಕ್ರಾಲಿ ಮತ್ತು ಮೂರನೇ ಕ್ರಮಾಂಕದ ಬ್ಯಾಟರ್ ಓಲಿ ಪೋಪ್ ವಿಕೆಟ್ ಆಗಿತ್ತು. ಪ್ರಸಕ್ತ ಸಾಗುತ್ತಿರುವ 2024 ರ ಸಾಲಿನ ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಸುತ್ತಿನ ಪಂದ್ಯಾವಳಿಯಲ್ಲಿ ಭಾರತ ಎ ತಂಡದ ಪರ ಆಡಿದ್ದ ಆಕಾಶ್ ದೀಪ್ ಭಾರತ ಬಿ ವಿರುದ್ಧದ ಪಂದ್ಯದಲ್ಲಿ ಒಂಬತ್ತು ವಿಕೆಟ್ ಪಡೆದಿದ್ದರು. ದ್ವಿತೀಯ ಇನಿಂಗ್ಸ್‌ನಲ್ಲಿ 5 ಕಿತ್ತಿದ್ದರು.
ಇದನ್ನೂ ಓದಿ IND vs BAN: ರದ್ದಾಗುವ ಭೀತಿಯಲ್ಲಿ ಭಾರತ-ಬಾಂಗ್ಲಾ ನಡುವಣ ಸರಣಿ; ಎಚ್ಚರಿಕೆ ನೀಡಿದ ಸಂಘಟನೆ
ಕೆಂಪು ಪಿಚ್‌ನಲ್ಲಿ ಪಂದ್ಯ
ಚಿದಂಬರಂ ಸ್ಟೇಡಿಯಂನಲ್ಲಿ ಆತಿಥೇಯ ಭಾರತ ತಂಡದ ಮೇಲುಗೈಗೆ ಅನುಕೂಲಕರ ಎನಿಸುವಂಥ ಕೆಂಪು ಮಣ್ಣಿನ ಪಿಚ್ ಸಿದ್ಧಪಡಿಸಲಾಗಿದೆ. ಬಾಂಗ್ಲಾ ತಂಡ ತವರಿನಲ್ಲಿ ಕಪ್ಪು ಮಣ್ಣಿನ ಪಿಚ್‌ನಲ್ಲಿ ಹೆಚ್ಚು ಆಡಿದ ಅನುಭವ ಹೊಂದಿದೆ. ಹೀಗಾಗಿ ಕೆಂಪು ಮಣ್ಣಿನ ಪಿಚ್ಗೆ ಹೊಂದಿಕೊಳ್ಳುವುದು ಬಾಂಗ್ಲಾ ಪಾಲಿಗೆ ಸವಾಲೆನಿಸಲಿದೆ. ಕೆಂಪು ಮಣ್ಣಿನ ಪಿಚ್ ಮೊದಲಿಗೆ ವೇಗದ ಬೌಲರ್ಗಳಿಗೆ ಹೆಚ್ಚಿನ ನೆರವು ಒದಗಿಸುತ್ತದೆ. ಕೆಂಪು ಮಣ್ಣಿನಲ್ಲಿ ಕಡಿಮೆ ಆವೆ ಅಂಶ ಇರುವುದರಿಂದ ಆರಂಭಿಕ ದಿನಗಳಲ್ಲಿ ಹೆಚ್ಚಿನ ಬೌನ್ಸ್ ಕಂಡುಬರಲಿದೆ. ಆರಂಭದಲ್ಲಿ ವೇಗಿಗಳು ಮೇಲುಗೈ ಸಾಧಿಸಬಹುದು. ಆದರೆ ಬ್ಯಾಟರ್‌ಗಳು ರನ್ ಗಳಿಸಲು ತಿಣುಕಾಡಬೇಕು. ಪಿಚ್‌ನಲ್ಲಿ ಬಿರುಕು ಕಾಣಿಸಿಕೊಂಡ ಬಳಿಕವಷ್ಟೇ ಸ್ಪಿನ್ನರ್ಗಳಿಗೆ ಪಿಚ್ ನೆರವಾಗುತ್ತದೆ.