Monday, 14th October 2024

Arjun Tendulkar: ಕರ್ನಾಟಕ ವಿರುದ್ಧ 9 ವಿಕೆಟ್‌ ಕಿತ್ತ ಸಚಿನ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌

Arjun Tendulkar

ಗೋವಾ: ಟೀಮ್‌ ಇಂಡಿಯಾದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌(Sachin Tendulkar) ಅವರ ಮಗ ಅರ್ಜುನ್ ತೆಂಡೂಲ್ಕರ್(Arjun Tendulkar) ಕರ್ನಾಟಕ(Karnataka) ವಿರುದ್ಧದ ಪಂದ್ಯದಲ್ಲಿ 9 ವಿಕೆಟ್ ಪಡೆದು ಮಿಂಚಿದ್ದಾರೆ. ಕರ್ನಾಟಕ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಕ್ಯಾಪ್ಟನ್ ಕೆ.ತಿಮ್ಮಯ್ಯ ಮೆಮೊರಿಯಲ್ ಪಂದ್ಯಾವಳಿಯಲ್ಲಿ ಗೋವಾ(Goa) ತಂಡವನ್ನು ಪ್ರತಿನಿಧಿಸಿದ ಅರ್ಜುನ್ 26.3 ಓವರ್‌ ಬೌಲಿಂಗ್‌ ನಡೆಸಿ 87 ರನ್ ವೆಚ್ಚದಲ್ಲಿ 9 ವಿಕೆಟ್‌ ಉಡಾಯಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ 36.5 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್‌ ಆಯಿತು. ಗೋವಾ 413 ರನ್ ಗಳಿಸಿತು, ಅಭಿನವ್ ತೇಜ್ರಾನಾ (109) ಶತಕ ಮತ್ತು ಮಂಥನ್ ಖುಟ್ಕರ್ 69 ರನ್ ಗಳಿಸಿದರು. ಎರಡನೇ ಇನಿಂಗ್ಸ್ ಆಡಿದ ಕರ್ನಾಟಕ 30.4 ಓವರ್ ಗಳಲ್ಲಿ 121 ರನ್ ಗೆ ಪತನಗೊಂಡಿತು. ಅಂತಿವಾಗಿ ಗೋವಾ ತಂಡ 189 ರನ್ ಗಳಿಂದ ಜಯಭೇರಿ ಬಾರಿಸಿತು.

ಅರ್ಜುನ್ ತೆಂಡೂಲ್ಕರ್ ಎರಡೂ ಇನಿಂಗ್ಸ್‌ ಸೇರಿ 9 ವಿಕೆಟ್ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ 41 ರನ್ ಗೆ 5 ವಿಕೆಟ್ ಪಡೆದ ಅರ್ಜುನ್‌ ದ್ವಿತೀಯ ಇನಿಂಗ್ಸ್‌ನಲ್ಲಿ 46 ರನ್ ನೀಡಿ 4 ವಿಕೆಟ್ ಪಡೆದರು. ಮುಂದಿನ ವಾರ ಅರ್ಜುನ್‌ 25ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ರಣಜಿ ಮತ್ತು ಐಪಿಎಲ್‌ ಆಡಿದ ಅನುಭವ ಅರ್ಜುನ್‌ ಅವರದ್ದು. ಸದ್ಯ ಅರ್ಜುನ್‌ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಅವರ ತಂದೆ ಯೋಗರಾಜ್ ಸಿಂಗ್‌​ ಗರಡಿಯಲ್ಲೇ ಟ್ರೈನಿಂಗ್​ ಪಡೆಯುತ್ತಿದ್ದಾರೆ.

ಇದನ್ನೂ ಓದಿ Ananya Panday : ಅನನ್ಯಾ ಪಾಂಡೆಗೆ ರಿಯಾನ್ ಪರಾಗ್‌ಗಿಂತ ವಿರಾಟ್‌ ಕೊಹ್ಲಿಯೇ ಫೇವರಿಟ್‌

ಅರ್ಜುನ್ ತೆಂಡೂಲ್ಕರ್ ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲಿ ತಂದೆಯಂತೆ ಶತಕ ಬಾರಿಸಿ ಮಿಂಚಿದ್ದರು. 2022ರಲ್ಲಿ ರಣಜಿಗೆ ಪದಾರ್ಪಣೆ ಮಾಡಿದ ಅರ್ಜುನ್‌ ರಾಜಸ್ಥಾನ ವಿರುದ್ಧ ಶತಕ ಬಾರಿಸಿದ್ದರು. ತಂದೆ ಸಚಿನ್‌ ಕೂಡ 1988ರಲ್ಲಿ ತಾವಾಡಿದ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿದ್ದರು.

ಬೌಲಿಂಗ್‌ ಆಲ್ರೌಂಡರ್‌ ಆಗಿರುವ ಅರ್ಜುನ್‌ ಈವರೆಗೆ ಅವರು 13 ಪ್ರಥಮ ದರ್ಜೆ ಕ್ರಿಕೆಟ್‌ ಆಡಿ 481 ರನ್‌ ಮತ್ತು 21 ವಿಕೆಟ್‌ ಕಿತ್ತಿದ್ದಾರೆ. ಲಿಸ್ಟ್‌ ಎ ಪಂದ್ಯದಲ್ಲಿ 15 ಪಂದ್ಯ ಆಡಿ 21 ವಿಕೆಟ್‌ ಹಾಗೂ 62 ರನ್‌ ಗಳಿಸಿದ್ದಾರೆ. ಟಿ20 ಮಾದರಿಯಲ್ಲಿ 21 ಪಂದ್ಯಗಳಿಂದ 26 ವಿಕೆಟ್‌ ಕಲೆಹಾಕಿದ್ದಾರೆ.