ಮುಂಬೈ: ಕೋಲ್ಕತಾ ನೈಟ್ ರೇಡರ್ಸ್ ವಿರುದ್ಧದ ಭಾನುವಾರದ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿಯುವ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್ಗೆ ಪದಾರ್ಪಣೆ ಮಾಡಿದರು.
ರೋಹಿತ್ ಶರ್ಮ ಅವರು ಕ್ಯಾಪ್ ನೀಡಿ ತಂಡಕ್ಕೆ ಬರಮಾಡಿಕೊಂಡರು. ತಮ್ಮನ ಚೊಚ್ಚಲ ಪಂದ್ಯ ವೀಕ್ಷಿಸಲು ಅಕ್ಕ ಸಾರಾ ಕೂಡ ಉಪಸ್ಥಿತ ರಿದ್ದರು. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಖಾಯಂ ನಾಯಕ ರೋಹಿತ್ ಶರ್ಮ ಅವರು ಅಸೌಖ್ಯದಿಂದಾಗಿ ಪಂದ್ಯದಿಂದ ಹೊರ ಗುಳಿದರು. ಅವರ ಬದಲು ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಿದರು.
ಕಳೆದ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ಅರ್ಜುನ್ ತೆಂಡೂಲ್ಕರ್ ಗೋವಾ ಪರ ಪದಾರ್ಪಣ ಪಂದ್ಯದಲ್ಲೇ ಶತಕ ಬಾರಿಸುವ ಮೂಲಕ ತಂದೆ ಸಚಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಇದುವರೆಗೆ 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅವರು 12 ವಿಕೆಟ್‌ಗಳ ಜತೆಗೆ 233 ರನ್ ಗಳಿಸಿದ್ದಾರೆ.
ಕಳೆದ ವರ್ಷ ಮೆಗಾ ಹರಾಜಿನಲ್ಲಿ 30 ಲಕ್ಷಕ್ಕೆ ಬಿಡ್ ಮಾಡುವ ಮೂಲಕ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ರೀಟೈನ್ ಮಾಡಿತ್ತು.