Friday, 13th December 2024

ಆಶಸ್​ ಸರಣಿ: ಮೂರನೇ ಪಂದ್ಯ ಗೆದ್ದ ಇಂಗ್ಲೆಂಡ್​, ಬ್ರೂಕ್​ ವಿಶ್ವದಾಖಲೆ

ಲೀಡ್ಸ್​: ಇಂಗ್ಲೆಂಡ್ ತಂಡದ ಉದಯೋನ್ಮುಖ ಆಟಗಾರ ಹೆಡಿಂಗ್ಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಆಶಸ್​ ಸರಣಿಯ ಮೂರನೇ ಹಣಾಹಣಿಯಲ್ಲಿ ವಿಶ್ವದಾಖಲೆ ಬರೆದಿದ್ದಾರೆ.

ಅತ್ಯಂತ ಕಡಿಮೆ ಎಸೆತಗಳನ್ನು ಎದುರಿಸಿ ವೇಗವಾಗಿ 1,000 ಟೆಸ್ಟ್ ರನ್ ಗಳಿಸಿದ ಆಟಗಾರ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

24ರ ಹರೆಯದ ಬ್ರೂಕ್​ ಈ ಮೈಲಿಗಲ್ಲು ತಲುಪಲು ಕೇವಲ 1,058 ಎಸೆತಗಳನ್ನು ಆಡಿದ್ದಾರೆ. ಈ ಮೂಲಕ ಅವರು 1,140 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದ ನ್ಯೂಜಿಲೆಂಡ್‌ನ ಕಾಲಿನ್ ಡಿ ಗ್ರಾಂಡ್‌ಹೋಮ್ ಅವರ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಮುರಿದರು. ಗ್ರಾಂಡ್‌ಹೋಮ್ ಬಳಿಕ ಕಿವೀಸ್​ ಮತ್ತೋರ್ವ ಆಟಗಾರ ಟಿಮ್ ಸೌಥಿ 1,167 ಎಸೆತಗಳಲ್ಲಿ ಸಾವಿರ ರನ್​ ಬಾರಿಸಿ ಮೂರನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಆರಂಭಿಕ ಆಟಗಾರ ಬೆನ್ ಡಕೆಟ್ 1,168 ಎಸೆತಗಳಲ್ಲಿ ಈ ಸಾಧನೆಗೆ ಪಾತ್ರರಾಗಿದ್ದಾರೆ.

ಇದುವರೆಗೆ 10 ಟೆಸ್ಟ್​ ಪಂದ್ಯಗಳಿಂದ 17 ಇನ್ನಿಂಗ್ಸ್​ಗಳನ್ನು ಆಡಿರುವ ಹ್ಯಾರಿ ಬ್ರೂಕ್​ 1028 ರನ್​ ಪೇರಿಸಿದ್ದಾರೆ. ಇದರಲ್ಲಿ ನಾಲ್ಕು ಶತಕ ಹಾಗೂ 5 ಅರ್ಧಶತಕಗಳು ಸೇರಿವೆ. 94.31ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿರುವ ಬ್ರೂಕ್​ 64.25ರ ಸರಾಸರಿಯಲ್ಲಿ ರನ್​ ಬಾರಿಸಿದ್ದಾರೆ. 186 ರನ್​ಗಳು ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ.

ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಆಶಸ್ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ. ಹ್ಯಾರಿ ಬ್ರೂಕ್ ಮತ್ತು ಕ್ರಿಸ್ ವೋಕ್ಸ್ 59 ರನ್‌ಗಳ ನಿರ್ಣಾಯಕ ಜೊತೆ ಯಾಟದ ಮೂಲಕ ಆಂಗ್ಲರಿಗೆ ಗೆಲುವು ಸುಲಭವಾಯಿತು. ಹ್ಯಾರಿ ಬ್ರೂಕ್ 75 ರನ್‌ ಬಾರಿಸಿದರೆ, ಆಲ್​ರೌಂಡರ್​ ಕ್ರಿಸ್​​ ವೋಕ್ಸ್ ಅಜೇಯ 32 ರನ್​ ಗಳಿಸುವ ಮೂಲಕ ಇಂಗ್ಲೆಂಡ್​ಗೆ ಜಯ ತಂದಿತ್ತರು. ಸದ್ಯ ಸರಣಿಯಲ್ಲಿ ಆಸ್ಟ್ರೇಲಿಯವು 2-1ರ ಮುನ್ನಡೆ ಯಲ್ಲಿದೆ. ಸರಣಿ ಜೀವಂತವಾಗಿರಿಸಿಕೊಳ್ಳಲು ಆಂಗ್ಲರು ಮುಂಬರುವ ಮ್ಯಾಂಚೆಸ್ಟರ್​ ಟೆಸ್ಟ್​ ಪಂದ್ಯವನ್ನು ಕೂಡ ಗೆಲ್ಲಲೇಬೇಕಿದೆ.

ಜು.19 ರಿಂದ ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಾಲ್ಕನೇ ಟೆಸ್ಟ್‌ ನಡೆಯಲಿದೆ.