Friday, 13th December 2024

ಏಷ್ಯಾ ಕಪ್ 2022 ಆಯೋಜನೆಗೆ ದಿನಾಂಕ ನಿಗದಿ

ನವದೆಹಲಿ: ಕೊಲಂಬೊದಲ್ಲಿ ಶನಿವಾರ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಏಷ್ಯಾ ಕಪ್ 2022 ಆಯೋಜನೆಗೆ ದಿನಾಂಕ ನಿಗದಿಯಾಗಿದೆ.

ಈ ಬಾರಿ ಟಿ20 ಮಾದರಿಯಲ್ಲಿ ಏಷ್ಯಾ ಕಪ್ ನಡೆಯಲಿದ್ದು, ಆಗಸ್ಟ್ 27 ರಂದು ಟೂರ್ನಿಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಸೆಪ್ಟಂಬರ್ 11 ರಂದು ಫೈನಲ್ ಪಂದ್ಯ ನಡೆಯ ಲಿದೆ. ಈ ಬಾರಿ ಟಿ20 ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗ ಲಿದೆ. ಏಷ್ಯಾ ಕಪ್​ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿದ್ದು, ಈಗಾಗಲೇ 5 ತಂಡಗಳು ಅರ್ಹತೆ ಪಡೆದುಕೊಂಡಿದೆ.

ಶ್ರೀಲಂಕಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಅರ್ಹತೆ ಪಡೆದಿವೆ. ಹಾಂಗ್ ಕಾಂಗ್, ಕುವೈತ್, ಸಿಂಗಾಪುರ ಮತ್ತು ಯುಎಇ ತಂಡಗಳು ಅರ್ಹತಾ ಸುತ್ತಿಗೆ ಪ್ರವೇಶಿಸಿವೆ.

1984 ರಲ್ಲಿ ಯುಎಇನಲ್ಲಿ ಶುರುವಾದ ಏಷ್ಯಾ ಕಪ್​ಗೆ ಈ ಬಾರಿ ಲಂಕಾ ಕ್ರಿಕೆಟ್ ಮಂಡಳಿ ಆತಿಥ್ಯವಹಿಸಲಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್​ನಲ್ಲಿ ನಡೆಯಲಿರುವ ಟಿ20 ವಿಶ್ವ ಕಪ್​ಗೂ ಮುನ್ನ ಟೂರ್ನಿಯನ್ನು ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿದೆ.

ಇದುವರೆಗೆ ಏಷ್ಯಾಕಪ್ ಅನ್ನು ಏಕದಿನ ಮಾದರಿಯಲ್ಲಿ ಆಡಿಸಲಾಗುತ್ತಿತ್ತು. ಇದೀಗ ಟಿ20 ಸ್ವರೂಪದಲ್ಲಿ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ. ಏಷ್ಯಾಕಪ್ ದಾಖಲೆಯನ್ನು ನೋಡಿದರೆ ಭಾರತ ತಂಡವೇ ಅತ್ಯಂತ ಯಶಸ್ವಿ ತಂಡವಾಗಿದೆ. ಟೀಮ್ ಇಂಡಿಯಾ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶ್ರೀಲಂಕಾ ತಂಡ 5 ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.