Friday, 13th December 2024

ಏಷ್ಯನ್ ಯೂತ್ ಚಾಂಪಿಯನ್‌ಷಿಪ್‌: ಸೆಮಿಫೈನಲ್’ಗೆ ಭಾರತದ ಬಾಕ್ಸರ್‌ಗಳು

ನವದೆಹಲಿ: ಭಾರತದ ನಾಲ್ವರು ಬಾಕ್ಸರ್‌ಗಳು ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಯೂತ್ ಚಾಂಪಿಯನ್‌ಷಿಪ್‌ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಸೋಮವಾರ ರಾತ್ರಿ ನಡೆದ ಸ್ಪರ್ಧೆಗಳಲ್ಲಿ ಭಾರತ ಏಳು ಮಂದಿ ಬಾಕ್ಸರ್‌ಗಳು ಕಣಕ್ಕಿಳಿದಿದ್ದರು. ಅದರಲ್ಲಿ ನಾಲ್ವರು ವಿಜಯ ಸಾಧಿಸಿ ಮುನ್ನಡೆದರು. ಪುರುಷ ಮತ್ತು ಮಹಿಳೆಯರಿಗಾಗಿ ನಡೆಯುತ್ತಿರುವ ಟೂರ್ನಿಯಲ್ಲಿ ಯೂತ್ ಮತ್ತು ಜೂನಿಯರ್ ವಿಭಾಗಗಳನ್ನು ಮೊದಲ ಬಾರಿಗೆ ಒಟ್ಟಾಗಿ ಆಯೋಜಿಸಲಾಗಿದೆ.

71 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಜೈದೀಪ್ ರಾವತ್‌ ಎರಡನೇ ಸುತ್ತಿನ ಹಣಾಹಣಿಯಲ್ಲಿ ಯುನೈಟೆಡ್‌ ಅರಬ್ ಎಮಿರೇಟ್ಸ್‌ನ ಮೊಹಮ್ಮದ್ ಈಸಾ ಎದುರು ಗೆದ್ದು ಬೀಗಿದರು. ವಂಶಜ್‌ (63.5 ಕೆಜಿ ವಿಭಾಗ) 5-0ಯಿಂದ ತಜಿಕಿಸ್ತಾನದ ಮಖಮೊವ್‌ ದಾವುದ್‌ ವಿರುದ್ಧ, ದಕ್ಷ್‌ಸಿಂಗ್‌ (67 ಕೆಜಿ) 4-1ರಿಂದ ಕಿರ್ಗಿಸ್ತಾನದ ಎಲ್ದರ್‌ ತುರ್ದುಬೆವ್‌ ಅವರನ್ನು ಪರಾಭವಗೊಳಿಸಿದರು.

ಸುರೇಶ್ ವಿಶ್ವನಾಥ್ (48 ಕೆಜಿ) 5-0ಯಿಂದ ಕಿರ್ಗಿಸ್ತಾನದ ಅಮಂಟೂರ್‌ ಝೋಲ್‌ ಬೊರೊಸಿ ಎದುರು ಜಯ ಸಾಧಿಸಿದರು. ವಿಕ್ಟರ್‌ ಸೈಕೊಮ್ ಸಿಂಗ್‌ (54 ಕೆಜಿ), ವಿಜಯ್‌ ಸಿಂಗ್‌ (57 ಕೆಜಿ) ಮತ್ತು ರವಿಂದರ್ ಸಿಂಗ್‌ ತಮ್ಮ ಬೌಟ್‌ಗಳಲ್ಲಿ ನಿರಾಸೆ ಅನುಭವಿಸಿದರು.