Saturday, 14th December 2024

AUS vs IND: ಭಾರೀ ಮಳೆ; 13.2 ಓವರ್‌ಗೆ ದಿನದಾಟ ಅಂತ್ಯ

ಬಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ(AUS vs IND) ನಡುವಿನ ಮೂರನೇ ಟೆಸ್ಟ್‌ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ಕೇವಲ 13.2 ಓವರ್‌ ಗಳಿಗೆ ಅಂತ್ಯ ಕಂಡಿತು. ವಿಕೆಟ್‌ ನಷ್ಟವಿಲ್ಲದೆ 28 ರನ್‌ಗಳಿಸಿರುವ ಆಸೀಸ್‌ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ.

ಶನಿವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ದುಕೊಂಡಿತು. ಮೊದಲ ಸೆಷನ್​ನಲ್ಲೇ 2 ಬಾರಿ ಮಳೆ ಅಡಚಣೆ ಉಂಟು ಮಾಡಿತು. ಚಹಾ ವಿರಾಮ ಮತ್ತು ಭೋಜನ ವಿರಾಮದ ತನಕ ಕಾದರೂ ಮಳೆ ಬಿಡುವು ನೀಡಲಿಲ್ಲ. ಹೀಗಾಗಿ 13.2 ಓವರ್‌ಗೆ ದಿನದಾಟವನ್ನು ರದ್ದುಗೊಳಿಸಲಾಯಿತು. ನಾಥನ್ ಮೆಕ್‌ಸ್ವೀನಿ(4*) ಮತ್ತು ಉಸ್ಮಾನ್‌ ಖವಾಜ(19*) ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಇದನ್ನೂ ಓದಿ WPL Auction 2025: ನಾಳೆ ಡಬ್ಲ್ಯುಪಿಎಲ್​ ಮಿನಿ ಹರಾಜು; ಕಣದಲ್ಲಿ 120 ಆಟಗಾರ್ತಿಯರು

ಭಾರತ ಈ ಪಂದ್ಯಕ್ಕೆ 2 ಬದಲಾವಣೆ ಮಾಡಿತು. ಆರ್‌.ಅಶ್ವಿನ್‌ ಮತ್ತು ಹರ್ಷಿತ್‌ ರಾಣಾ ಅವರನ್ನು ಕೈಬಿಟ್ಟು ಆಕಾಶ್‌ ದೀಪ್‌ ಮತ್ತು ರವೀಂದ್ರ ಜಡೇಜಾ ಅವರಿಗೆ ಅವಕಾಶ ನೀಡಲಾಯಿತು. ಗಾಯದಿಂದ ದ್ವಿತೀಯ ಪಂದ್ಯವನ್ನಾಡದ ಆಸೀಸ್‌ ವೇಗಿ ಜೋಶ್‌ ಹ್ಯಾಜಲ್‌ವುಡ್‌ ಈ ಪಂದ್ಯದಲ್ಲಿ ಮತ್ತೆ ಕಣಕ್ಕಿಳಿದರು. ಇವರಿಗಾಗಿ ಸ್ಕಾಟ್ ಬೋಲ್ಯಾಂಡ್ ಜಾಗ ಬಿಟ್ಟರು.

ಉಭಯ ತಂಡಗಳು

ಆಸ್ಟ್ರೇಲಿಯಾ: ಉಸ್ಮಾನ್ ಖ್ವಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿ.ಕೀ), ಪ್ಯಾಟ್ ಕಮಿನ್ಸ್ (ನಾ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್.

ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿ.ಕೀ), ರೋಹಿತ್ ಶರ್ಮಾ(ನಾ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ದಾಖಲೆ ಬರೆದ ಕೊಹ್ಲಿ

ವಿರಾಟ್‌ ಕೊಹ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ಆಸ್ಟ್ರೇಲಿಯಾ ವಿರುದ್ಧ 100 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಬರೆದರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 2ನೇ ಆಟಗಾರ ಎನಿಸಿಕೊಂಡರು. ಆಸೀಸ್‌ ವಿರುದ್ಧ ಅತ್ಯಧಿಕ ಪಂದ್ಯವನ್ನಾಡಿದ ದಾಖಲೆ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಸಚಿನ್‌ ಆಸೀಸ್‌ ವಿರುದ್ಧ 6,707 ರನ್ ಕಲೆಹಾಕಿದರೆ, ವಿರಾಟ್ ಕೊಹ್ಲಿ 5,326* ರನ್ ಗಳಿಸಿದ್ದಾರೆ. ಮಹೇಂದ್ರ ಸಿಂಗ್‌ ಧೋನಿ 91 ಪಂದ್ಯಗಳನ್ನಾಡಿ ನಾಲ್ಕನೇ ಸ್ಥಾನದಲ್ಲಿದ್ದಾರೆ.