Saturday, 23rd November 2024

AUS vs IND: ರೋಹಿತ್‌ ಶರ್ಮಾ ಆಗಮನದಿಂದ ಭಾರತಕ್ಕೆ ಎದುರಾಗುವ ಸಮಸ್ಯೆ ತಿಳಿಸಿದ ಆಡಂ ಗಿಲ್‌ಕ್ರಿಸ್ಟ್‌!

'KL Rahul tough to drop even if Rohit Sharma returns, says Former Australia batter Adam Gilchrist

ಪರ್ತ್‌: ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಎರಡನೇ ಟೆಸ್ಟ್‌ (AUS vs IND) ಪಂದ್ಯಕ್ಕೆ ಆಗಮಸಿದ ಬಳಿಕ ಪ್ರವಾಸಿ ತಂಡದ ಪ್ಲೇಯಿಂಗ್‌ XIನಲ್ಲಿ ಎದುರಾಗುವ ದೊಡ್ಡ ಸಮಸ್ಯೆಯನ್ನು ಆಸ್ಟ್ರೇಲಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಡಮ್‌ ಗಿಲ್‌ಕ್ರಿಸ್ಟ್‌ ಬಹಿರಂಗಪಡಿಸಿದ್ದಾರೆ. ಆರಂಭಿಕನಾಗಿ ಕೆಎಲ್‌ ರಾಹುಲ್‌ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೆ, ರೋಹಿತ್‌ ಶರ್ಮಾ ಬಂದ ಬಳಿಕ ಆರಂಭಿಕ ಸ್ಥಾನಕ್ಕೆ ಯಾರನ್ನು ಆಡಿಸಬೇಕೆಂಬ ತಲೆ ನೋವು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಎದುರಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಎರಡನೇ ಮಗುವಿನ ಕಾರಣ ರೋಹಿತ್‌ ಶರ್ಮಾ ಪರ್ತ್‌ ಟೆಸ್ಟ್‌ಗೆ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಔಟ್‌ ಆಫ್‌ ಫಾರ್ಮ್‌ ಹೊರತಾಗಿಯೂ ಕೆಎಲ್‌ ರಾಹುಲ್‌ಗೆ ಇನಿಂಗ್ಸ್‌ ಆರಂಭಿಸಲು ಅವಕಾಶ ನೀಡಲಾಗಿತ್ತು. ಪ್ರಥಮ ಇನಿಂಗ್ಸ್‌ನಲ್ಲಿ 26 ರನ್‌ ಗಳಿಸಿ ವಿವಾದಾತ್ಮಕವಾಗಿ ವಿಕೆಟ್‌ ಒಪ್ಪಿಸಿದ್ದ ಕನ್ನಡಿಗ, ದ್ವಿತೀಯ ಇನಿಂಗ್ಸ್‌ನಲ್ಲಿ ತಮ್ಮ ತಾಳ್ಮೆಯ ಬ್ಯಾಟಿಂಗ್‌ ಮೂಲಕ ಕಮ್‌ಬ್ಯಾಕ್‌ ಮಾಡಿ ಅಜೇಯ ಅರ್ಧಶತಕ ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಕ್ರಿಕ್‌ಬಝ್‌ ಜೊತೆ ಮಾತನಾಡಿದ ಆಡಮ್‌ ಗಿಲ್‌ಕ್ರಿಸ್ಟ್‌, ಪರ್ತ್‌ ಟೆಸ್ಟ್‌ನ ಎರಡನೇ ದಿನ ಕೆಎಲ್‌ ರಾಹುಲ್‌ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದಾರೆ. ಆ ಮೂಲಕ ಕಮ್‌ಬ್ಯಾಕ್‌ ಮಾಡಿದ್ದಾರೆ. ನಾಯಕ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್‌ ರಾಹುಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಒತ್ತಡದ ಸನ್ನಿವೇಶದಲ್ಲಿ ಉತ್ತಮ ಪ್ರದರ್ಶನವನ್ನು ಹೊರ ತಂದಿದ್ದಾರೆಂದು ಹೇಳಿದ್ದಾರೆ.

IND vs AUS: 26 ರನ್‌ಗೆ ಔಟಾದರೂ ವಿಶೇಷ ದಾಖಲೆ ಬರೆದ ಕನ್ನಡಿಗ ಕೆಎಲ್‌ ರಾಹುಲ್‌!

ಕೆಎಲ್‌ ರಾಹುಲ್‌ ಕಮ್‌ಬ್ಯಾಕ್‌

ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್‌ ವಿರುದ್ಧದ ತವರು ಟೆಸ್ಟ್‌ ಸರಣಿಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಆದರೆ, ಪರ್ತ್‌ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶನ ತೋರಿದ ಕೆಎಲ್‌ ರಾಹುಲ್‌, 153 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ ಅಜೇಯ 62 ರನ್‌ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಎರಡನೇ ಟೆಸ್ಟ್‌ ಪಂದ್ಯಕ್ಕೆ ರೋಹಿತ್‌ ಶರ್ಮಾ ಬಂದರೆ ಕೆಎಲ್‌ ರಾಹುಲ್‌ ಅವರನ್ನು 5 ಅಥವಾ 6ನೇ ಕ್ರಮಾಂಕದಲ್ಲಿ ಆಡಿಸಬಹುದು. ಆದರೆ, ಆಸ್ಟ್ರೇಲಿಯಾ ದಿಗ್ಗಜ ಗಿಲ್‌ಕ್ರಿಸ್ಟ್‌ ಇದಕ್ಕೆ ಒಪ್ಪುತ್ತಿಲ್ಲ.

ಭಾರತ ತಂಡದಲ್ಲಿ ಆಯ್ಕೆಗಳು ಉತ್ತಮವಾಗಿವೆ

“ಎರಡೇ ದಿನಗಳಲ್ಲಿ ಈ ಸರಣಿಯಲ್ಲಿ ತಲೆ ನೋವು ಶುರುವಾಗಿದೆ. ನ್ಯೂಜಿಲೆಂಡ್‌ ವಿರುದ್ಧ 0-3 ಅಂತರದಲ್ಲಿ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಷ್‌ ಆಘಾತ ಅನುಭವಿಸಿ ಇಲ್ಲಿಗೆ ಬಂದಿರುವ ಭಾರತ ತಂಡ ಸ್ವಲ್ಪ ಭಯ ಹಾಗೂ ಆತಂಕಕ್ಕೆ ಒಳಗಾಗಿತ್ತು. ಅಲ್ಲದೆ ರಹಸ್ಯ ಜಾಗದಲ್ಲಿ ಅಭ್ಯಾಸವನ್ನು ನಡೆಸಿದೆ. ಅಲ್ಲದೆ ಅನಿರೀಕ್ಷಿತವಾಗಿ ಗಾಯ ಹಾಗೂ ಇನ್ನಿತರ ಕಾರಣಗಳಿಂದ ತಂಡದ ಸಂಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳ ಆದವು. ಆದರೆ, ಭಾರತ ತಂಡದಲ್ಲಿ ಉತ್ತಮ ಆಯ್ಕೆಗಳಿವೆ. ಶುಭಮನ್‌ ಗಿಲ್‌ ಬೇಗ ಗಾಯಕ್ಕೆ ತುತ್ತಾದರು. ರೋಹಿತ್‌ ಶರ್ಮಾ ಅವರು ಇನ್ನಷ್ಟು ದಿನಗಳ ಕಾಲ ವಿರಾಮ ಪಡೆದು ಅವರು ಗಬ್ಬಾದಲ್ಲಿ ನಡೆಯುವ ಮೂರನೇ ಟೆಸ್ಟ್‌ಗೆ ಬರಬೇಕು,” ಎಂದು ಗಿಲ್‌ಕ್ರಿಸ್ಟ್‌ ಸಲಹೆ ನೀಡಿದ್ದಾರೆ.

IND vs AUS: ʻಕೆಎಲ್‌ ರಾಹುಲ್‌ರ ವಿವಾದಾತ್ಮಕ ಕ್ಯಾಚ್‌ʼ-ಮಿಚೆಲ್‌ ಸ್ಟಾರ್ಕ್‌ ಪ್ರತಿಕ್ರಿಯೆ ಹೀಗಿದೆ!

ಕೆಎಲ್‌ ರಾಹುಲ್‌ ಮುಂದುವರಿಯಲಿ

“ಭಾರತ ತಂಡದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಾಣುತ್ತಿವೆ. ಆದರೆ, ಇಲ್ಲಿ ಒಂದು ಸಂಗತಿ ಮಾತ್ರ ಎಲ್ಲರಿಗೂ ತಲೆ ನೋವು ನೀಡಲಿದೆ. ತಮ್ಮ ವೃತ್ತಿ ಜೀವನದಲ್ಲಿ ಕೆಎಲ್‌ ರಾಹುಲ್‌ ಭಾರತ ತಂಡದ ಪರ ಎಲ್ಲಾ ಕ್ರಮಾಂಕದಲ್ಲಿ ಆಡಿ ನೆರವು ನೀಡಿದ್ದಾರೆ. ಹಾಗಾಗಿ ಆದರೆ, ರೋಹಿತ್‌ ಶರ್ಮಾ ಆಡುವ ಬಳಗಕ್ಕೆ ಬಂದರೂ ಕೆಎಲ್‌ ರಾಹುಲ್‌ ಅವರನ್ನು ಕೈ ಬಿಡುವುದು ಕಠಿಣ ನಿರ್ಧಾರ. ನನಗೆ ತಿಳಿದ ಹಾಗೆ ರಾಹುಲ್‌ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಮುಂದುವರಿಸಬೇಕು,” ಎಂದು ಆಸೀಸ್‌ ಮಾಜಿ ಆರಂಭಿಕ ಸಲಹೆ ನೀಡಿದ್ದಾರೆ.