Wednesday, 1st January 2025

AUS vs IND: ಬುಮ್ರಾ, ಸಿರಾಜ್‌ ಘಾತಕ ದಾಳಿಯ ಮಧ್ಯೆಯೂ ಬೃಹತ್‌ ಮುನ್ನಡೆ ಸಾಧಿಸಿದ ಆಸೀಸ್‌

ಮೆಲ್ಬರ್ನ್‌: ಭಾರತ ಮತ್ತು ಆಸ್ಟ್ರೇಲಿಯಾ(AUS vs IND) ನಡುವಣ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ ಕೈಮ್ಯಾಕ್ಸ್‌ ಹಂತಕ್ಕೆ ಬಂದು ನಿಂತಿದೆ. ದ್ವಿತೀಯ ಇನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದ ಆಸ್ಟ್ರೇಲಿಯಾ ಆರಂಭಿಕ ಆಘಾತದ ಹೊರತಾಗಿಯೂ ಕೆಲ ಕ್ರಮಾಂಕದಲ್ಲಿ ಬ್ಯಾಟರ್‌ಗಳು ನಡೆಸಿದ ದಿಟ್ಟ ಹೋರಾಟದ ನೆರವಿನಿಂದ 9 ವಿಕೆಟ್‌ಗೆ 228 ರನ್‌ ಬಾರಿಸಿ ಒಟ್ಟಾರೆ 333 ರನ್‌ ಮುನ್ನಡೆಯೊಂದಿಗೆ ಅಂತಿಮ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ. ಮೂರನೇ ದಿನದಾಟದ ವೇಳೆ ಮಳೆ ಮತ್ತು ಮಂದಬೆಳಕಿನ ಕಾರಣದಿಂದ ನಷ್ಟವಾದ ಆಟವನ್ನು ಸರಿದೂಗಿಸಲು ನಾಲ್ಕನೇ ದಿನವಾದ ಇಂದು ದಿನದಾಟವನ್ನು ಅರ್ಧ ಗಂಟೆ ಮುಂಚಿತವಾಗಿ ಆರಂಭಿಸಲಾಯಿತು.

ನಾಲ್ಕನೇ ದಿನವಾದ ಭಾನುವಾರ ಬೆಳಗ್ಗೆ 9 ವಿಕೆಟ್‌ಗೆ 358 ರನ್ ಗಳಿಂದ ಆಟ ಆರಂಭಿಸಿದ ಭಾರತ ಕೇವಲ 11 ರನ್‌ ಬಾರಿಸಲಷ್ಟೇ ಶಕ್ತವಾಗಿ 369 ರನ್‌ಗಳಿಗೆ ಆಲೌಟ್‌ ಆಯಿತು. 105 ರನ್‌ ಗಳಿಸಿದ್ದ ಶತಕ ವೀರ ನಿತೀಶ್‌ ಕುಮಾರ್‌ ರೆಡ್ಡಿ ಅಂತಿಮವಾಗಿ 114 ರನ್‌ಗೆ ವಿಕೆಟ್‌ ಕಳೆದುಕೊಂಡರು. ಇವರ ವಿಕೆಟ್‌ ಪತನದೊಂದಿಗೆ ಭಾರತದ ಇನಿಂಗ್ಸ್‌ ಕೂಡ ಕೊನೆಗೊಂಡಿತು. ಮೊಹಮ್ಮದ್‌ ಸಿರಾಜ್‌ ಅಜೇಯ 4 ರನ್‌ ಗಳಿಸಿದರು.

ಬುಮ್ರಾ, ಸಿರಾಜ್‌ ಘಾತಕ ದಾಳಿ

ಮೊದಲ ಇನಿಂಗ್ಸ್‌ನ 105 ರನ್‌ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ, ದೊಡ್ಡ ಮೊತ್ತ ಪೇರಿಸಿ ಭಾರತದ ಮೇಲೆ ಒತ್ತಡ ಹೇರಬಹುದೆಂದು ಲೆಕ್ಕಾಚಾರ ಹಾಕಿತ್ತು. ಆದರೆ ಜಸ್‌ಪ್ರೀತ್‌ ಬುಮ್ರಾ ಮತ್ತು ಮೊಹಮ್ಮದ್‌ ಸಿರಾಜ್‌ ಸೇರಿಕೊಂಡು ಆಸೀಸ್‌ನ ಈ ಲೆಕ್ಕಾಚಾರವನ್ನು ಬುಡಮೇಲು ಮಾಡಿದರು. ಘಾತಕ ಬೌಲಿಂಗ್‌ ದಾಳಿಗೆ ನಲುಗಿನ ಆಸೀಸ್‌ 100 ರನ್‌ ಆಗುವ ಮುನ್ನವೇ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅನುಭವಿ ಬ್ಯಾಟರ್‌ಗಳಾದ ಟ್ರಾವಿಸ್‌ ಹೆಡ್‌(1), ಖವಾಜಾ(21), ಸ್ಟೀವನ್‌ ಸ್ಮಿತ್‌(13), ಅಲೆಕ್ಸ್‌ ಕ್ಯಾರಿ(2) ಮತ್ತು ಮಾರ್ಷ್‌(0) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಪರೇಡ್‌ ನಡೆಸಿದರು.

ಲಬುಶೇನ್‌ ಆಸರೆ

ಒಂದೆಡೆ ಸಹ ಆಟಗಾರರ ವಿಕೆಟ್‌ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಮಾರ್ನಸ್‌ ಲಬುಶೇನ್‌ ಬೇರೂರಿ ನಿಂತಿದ್ದರು. ತಾಳ್ಮೆಯುವ ಬ್ಯಾಟಿಂಗ್‌ ಮೂಲಕ ತಮ್ಮ ಹಾಗೂ ತಂಡದ ಮೊತ್ತವನ್ನು ಹಿಗ್ಗಿಸಿದರು. 46 ರನ್‌ ಗಳಿಸಿದ್ದ ವೇಳೆ ಯಶಸ್ವಿ ಜೈಸ್ವಾಲ್‌ ಅವರಿಂದ ಕ್ಯಾಚ್‌ ಕೈಚೆಲ್ಲಿ ಪಡೆದ ಜೀವದಾನವನ್ನು ಸದುಪಯೋಗಪಡಿಸಿಕೊಂಡ ಅವರು 70 ರನ್‌ ಬಾರಿಸಿದರು. ಲಬುಶೇನ್‌ ಅವರು 7 ವಿಕೆಟ್‌ಗೆ ಕಮಿನ್ಸ್‌ ಜತೆ ಸೇರಿಕೊಂಡು 52 ರನ್‌ಗಳ ಜತೆಯಾಟ ನಡೆಸಿದರು.

ಇದನ್ನೂ ಓದಿ AUS vs IND: 147 ವರ್ಷಗಳ ಟೆಸ್ಟ್‌ ಇತಿಹಾಸದಲ್ಲಿ ನೂತನ ದಾಖಲೆ ಬರೆದ ಬುಮ್ರಾ

ಕಮಿನ್ಸ್‌-ಲಿಯೋನ್‌ ಬೊಂಬಾಟ್‌ ಆಟ

ಲಬುಶೇನ್‌ ವಿಕೆಟ್‌ ಪತನದ ಬಳಿಕ ಕೆಲ ಕ್ರಮಾಂಕದಲ್ಲಿ ಪ್ಯಾಟ್‌ ಕಮಿನ್ಸ್‌ ಮತ್ತು ಸ್ಪಿನ್ನರ್‌ ನಥಾನ್‌ ಲಿಯೋನ್‌ ಅಸಾಧಾರಣ ಬ್ಯಾಟಿಂಗ್‌ ನಡೆಸಿ ಭಾರತೀಯ ಬೌಲರ್‌ಗಳನ್ನು ಕಾಡಿದರು. ಆರಂಭಿಕ ಹಂತದಲ್ಲಿ ಭಾರತೀಯ ಬೌಲರ್‌ಗಳು ತೋರಿದ ಪ್ರದರ್ಶನ ಆ ನಂತರ ಕಂಡು ಬರಲಿಲ್ಲ. ಬಾಲಂಗೋಚಿಗಳ ವಿಕೆಟ್‌ ಕೀಳಲು ಪರದಾಟ ನಡೆಸಿದರು. ನಾಯಕ ಆಟವಾಡಿದ ಕಮಿನ್ಸ್‌ 90 ಎಸೆತ ಎದುರಿಸಿ 41ರನ್‌ಗಳ ಕೊಡುಗೆ ನೀಡಿದರು. 9ನೇ ಕ್ರಮಾಂಕದಲ್ಲಿ ಆಡಲಿಳಿದ ಸ್ಪಿನ್ನರ್‌ ನಥಾನ್‌ ಲಿಯೋನ್‌ ದಿಟ್ಟ ಬ್ಯಾಟಿಂಗ್‌ ನಡೆಸಿ 41, ಸ್ಕಾಟ್‌ ಬೋಲ್ಯಾಂಡ್‌ 10 ರನ್‌ ಬಾರಿಸಿ 5ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಈ ಜೋಡಿ ಅಂತಿಮ ವಿಕೆಟ್‌ಗೆ‌ ಮುರಿಯದ 55 ರನ್ ಜತೆಯಾಟ ನಡೆಸಿತು. ಸದ್ಯದ ಸ್ಥಿತಿ ನೋಡುವಾಗ ಪಂದ್ಯ ಡ್ರಾ ಗೊಳ್ಳುವ ಸಾಧ್ಯತೆ ಕಂಡುಬಂದಿದೆ. ಇದು ಭಾರತ ನಾಳೆ(ಸೋಮವಾರ) ನಿಂತು ಆಡಿದರೆ ಮಾತ್ರ.

ಬುಮ್ರಾ ವಿಶ್ವ ದಾಖಲೆ

ನಾಲ್ಕನೇ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಕೀಳುತ್ತಿದ್ದಂತೆ ಜಸ್‌ಪ್ರೀತ್‌ ಬುಮ್ರಾ ತಮ್ಮ ಟೆಸ್ಟ್‌ ಕ್ರಿಕೆಟ್‌ ಬಾಳ್ವೆಯಲ್ಲಿ 200 ವಿಕೆಟ್‌ ಪೂರ್ತಿಗೊಳಿಸಿದರು. ಇದೇ ವೇಳೆ  147 ವರ್ಷಗಳ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ  20 ಕ್ಕಿಂತ ಕಡಿಮೆ ಅವರೇಜ್​ನಲ್ಲಿ 200 ವಿಕೆಟ್ ಕಬಳಿಸಿದ ವಿಶ್ವದ ಮೊದಲ ಬೌಲರ್ ಎಂಬ ಹೊಸ ಮೈಲುಗಲ್ಲು ನೆಟ್ಟರು. ಬುಮ್ರಾಗೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್​ನ ಜೋಯಲ್ ಗಾರ್ನರ್ ಹೆಸರಿನಲ್ಲಿತ್ತು. ಅವರು 20.34 ರ ಸರಾಸರಿಯಲ್ಲಿ 200 ವಿಕೆಟ್ ಕಬಳಿಸಿದ್ದರು. 200 ವಿಕೆಟ್‌ ಪೂರ್ತಿಗೊಳಿದ ಭಾರತದ 6ನೇ ವೇಗಿ ಎಂಬ ಹಿರಿಮೆಗೂ ಬುಮ್ರಾ ಪಾತ್ರರಾದರು. ಕಪಿಲ್ ದೇವ್, ಇಶಾಂತ್ ಶರ್ಮಾ, ಜಾವಗಲ್ ಶ್ರೀನಾಥ್, ಜಹೀರ್‌ ಖಾನ್‌ ಮತ್ತು ಮೊಹಮ್ಮದ್ ಶಮಿ ಉಳಿದ ಸಾಧಕರು.