Friday, 13th December 2024

ಅವಮಾನಕರ ಸೋಲುಂಡ ಆಸ್ಟ್ರೇಲಿಯಾ

ಢಾಕಾ: ಪ್ರವಾಸಿ ಆಸ್ಟ್ರೇಲಿಯಾ ತಂಡ ಬಾಂಗ್ಲಾದೇಶ ವಿರುದ್ಧ 4-1 ಅಂತರದಿಂದ ಸರಣಿ ಸೋಲನುಭವಿಸಿದೆ. ಸೋಮವಾರ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಆಸೀಸ್ ತಂಡ ಕೇವಲ 62 ರನ್ ಗೆ ಆಲ್ ಔಟಾಗಿ ಅವಮಾನ ಅನುಭವಿಸಿದೆ.

ಬಾಂಗ್ಲಾ 20 ಓವರ್ ಗಳಲ್ಲಿ 122 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ಆಸೀಸ್ ಕೇವಲ 13.4 ಓವರ್ ಗಳಲ್ಲಿ 62 ರನ್ ಗೆ ಆಲ್ ಔಟ್ ಆಯಿತು.

ಬಾಂಗ್ಲಾ ಪರ ನಯೀಮ್ 23 ರನ್, ಮೊಹಮದುಲ್ಲಾ 19 ರನ್, ಸೌಮ್ಯ ಸರ್ಕಾರ್ 16 ರನ್ ಗಳಿಸಿದರು. ಆಸೀಸ್ ತಂಡ 18 ಇತರೆ ರನ್ ನೀಡಿತು. ಆಸೀಸ್ ಪರ ನಥನ್ ಎಲಿಸ್ ಮತ್ತು ಕ್ರಿಶ್ಚಿಯನ್ ತಲಾ ಎರಡು ವಿಕೆಟ್ ಪಡೆದರೆ, ಟರ್ನರ್, ಆಯಗರ್ ಮತ್ತು ಜಾಂಪಾ ತಲಾ ಒಂದು ವಿಕೆಟ್ ಕಿತ್ತರು.

ಆಸ್ಟ್ರೇಲಿಯಾ ತಂಡದ ಪರ ನಾಯಕ ಮ್ಯಾಥ್ಯೂ ವೇಡ್ ( 22 ರನ್) ಮತ್ತು ಬೆನ್ ಮೆಕ್ ಡೆರ್ಮಾಟ್ (17 ರನ್) ಮಾತ್ರ ಎರಡಂಕೆ ಮೊತ್ತ ಗಳಿಸಿದರು. ಮಾರಕ ದಾಳಿ ನಡೆಸಿದ ಶಕಿಬ್ ಅಲ್ ಹಸನ್ ನಾಲ್ಕು ವಿಕೆಟ್ ಕಿತ್ತರೆ, ಸೈಫುದ್ದೀನ್ ಮೂರು ವಿಕೆಟ್ ಪಡೆದರು. ಬಾಂಗ್ಲಾದೇಶ ತಂಡ 60 ರನ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು.

ಆಸೀಸ್ ತಂಡ ಇದೇ ಮೊದಲ ಬಾರಿಗೆ ಬಾಂಗ್ಲಾ ವಿರುದ್ಧ ಟಿ20 ಸರಣಿ ಸೋಲನುಭವಿಸಿತು. ಕಳೆದ ತಿಂಗಳು ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೂ ಆಸೀಸ್ 4-1 ಅಂತರದಿಂದ ಸೋಲು ಕಂಡಿತ್ತು.