Wednesday, 11th December 2024

ರಾಷ್ಟ್ರೀಯ ತಂಡಕ್ಕೆ ಪ್ರಮುಖ ಆದ್ಯತೆ: ಬೆನ್ ಸ್ಟೋಕ್ಸ್

ವೆಲ್ಲಿಂಗ್ಟನ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಗಿಂತ ರಾಷ್ಟ್ರೀಯ ತಂಡಕ್ಕೆ ಪ್ರಮುಖ ಆದ್ಯತೆ ನೀಡುವು ದಾಗಿ ವಿಶ್ವಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ, ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಹೇಳಿದ್ದಾರೆ.

ಸ್ಟೋಕ್ಸ್ ಅವರು ಐಪಿಎಲ್‌ ಟೂರ್ನಿಯಲ್ಲಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಲಿದ್ದಾರೆ.

‘ಒಂದು ವೇಳೆ ಚೆನ್ನೈ ತಂಡ ಫೈನಲ್ ತಲುಪಿದರೂ ಆ ಸಂದರ್ಭದಲ್ಲಿ ರಾಷ್ಟ್ರೀಯ ತಂಡ ವನ್ನು ಮುನ್ನಡೆಸುವ ಅವಕಾಶ ಬಂದರೆ ನಾನು ಇಂಗ್ಲೆಂಡ್ ತಂಡದ ಪರವೇ ಆಡುತ್ತೇನೆ’ ಎಂದು ಸ್ಟೋಕ್ಸ್ ಹೇಳಿದ್ದಾರೆ.

ವಿಶ್ವದ ಪ್ರಮುಖ ಟಿ20 ಟೂರ್ನಿಯಾಗಿರುವ ಐಪಿಎಲ್‌ ಮಾರ್ಚ್‌ 31ರಿಂದ ನಡೆಯಲಿದೆ. ಮೇ 28ರಂದು ಫೈನಲ್ ನಿಗದಿಯಾಗಿದೆ. ಆದರೆ ಇಂಗ್ಲೆಂಡ್‌ ತಂಡವು ಆಷಸ್‌ ಸರಣಿಯ ಸಿದ್ಧತೆಗಾಗಿ ಐರ್ಲೆಂಡ್ ಎದುರು ಜೂನ್ 1ರಿಂದ ಟೆಸ್ಟ್ ಅಭ್ಯಾಸ ಪಂದ್ಯವನ್ನು ಆಡಲಿದೆ.

ಆಟಗಾರರು ರಾಷ್ಟ್ರೀಯ ತಂಡಕ್ಕಿಂತ ಖಾಸಗಿ ಲೀಗ್‌ಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬ ಚರ್ಚೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿದೆ. ಐಪಿಎಲ್‌ನಲ್ಲಿ ಆಡಲಿರುವ ತಮ್ಮ ತಂಡದ ಇನ್ನುಳಿದ ಆಟಗಾರರ ಮೊದಲ ಆಯ್ಕೆ ಯಾವುದು ಎಂಬುದರ ಕುರಿತು ಸ್ಟೋಕ್ಸ್ ಮಾತನಾಡಲಿಲ್ಲ.