Wednesday, 11th December 2024

Champions Trophy 2025: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಐಸಿಸಿ

Champions Trophy 2025

ದುಬೈ: ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ(Champions Trophy 2025) ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗಾಗಲೇ ಬರದಿಂದ ಸಿದ್ಧತೆ ನಡೆಸುತ್ತಿದೆ. ಮತ್ತೊಂಡೆದೆ ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಪಟ್ಟು ಹಿಡಿದಿದೆ. ಈ ಮಧ್ಯೆಯೂ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಟೂರ್ನಿಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವೇಳಾಪಟ್ಟಿ ಪ್ರಕಾರ ಭಾರತ ಮತ್ತು ಪಾಕ್‌ ಪಂದ್ಯ ಮಾರ್ಚ್​ 1ರಂದು ಲಾಹೋರ್​ನಲ್ಲಿ(Champions Trophy IND vs PAK)​ ಪಂದ್ಯ ನಡೆಯಬೇಕಿದೆ. ಇದೆಲ್ಲದರ ನಡುವೆ ಐಸಿಸಿ ಈ ಪಂದ್ಯಾವಳಿಯ ಬಗ್ಗೆ ಮಹತ್ವದ ಅಪ್‌ಡೇಟ್‌ ಒಂದನ್ನು ನೀಡಿದೆ. ಚಾಂಪಿಯನ್ಸ್‌ ಟ್ರೋಫಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿದೆ. ಇದು ಬಿಸಿಸಿಐಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ.

ಜಯ್‌ ಶಾ ಅವರು ನೂತನ ಐಸಿಸಿ ಅಧ್ಯಕ್ಷರಾದ ಕಾರಣ ಈ ಟೂರ್ನಿ ಪಾಕ್‌ನಿಂದ ಸ್ಥಳಾಂತರಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ, ಐಸಿಸಿ ಚೀಫ್ ಎಕ್ಸಿಕ್ಯೂಟಿವ್ ಜೆಫ್ ಅಲ್ಲಾರ್ಡೈಸ್(Geoff Allardice), ಸದ್ಯಕ್ಕೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ಸ್ಥಳಾಂತರಿಸುವ ಯಾವುದೇ ಆಲೋಚನೆಯಿಲ್ಲ ಎಂದು ಹೇಳಿದ್ದಾರೆ.

“ಸದ್ಯಕ್ಕಂತು ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಟೂರ್ನಿಯನ್ನು ಪಾಕಿಸ್ತಾನದಿಂದ ಹೊರಗಡೆ ಆಯೋಜಿಸುವ ಆಲೋಚನೆಯಿಲ್ಲ. ಇರುವ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಈಗಾಗಲೇ ನಾವೇನು ಅಂದುಕೊಂಡಿದ್ದೇವೋ, ಅದರಂತೆ ಪಾಕಿಸ್ತಾನದಲ್ಲೇ ಟೂರ್ನಿ ಆಯೋಜಿಸುವ ನಿಟ್ಟಿನಲ್ಲಿ ಸಜ್ಜಾಗಿದ್ದೇವೆ” ಎಂದು ಹೇಳಿದ್ದಾರೆ. ಇವರ ಈ ಹೇಳಿಕೆಯಿಂದ ಭಾರತ ತಂಡ ಪಾಕ್‌ಗೆ ಪ್ರಯಾಣಿಸಲಿದೆಯಾ ಎಂಬ ಪ್ರಶ್ನೆ ಮತ್ತೆ ಹುಟ್ಟಿಕೊಂಡಿದೆ.

ಒಂದೊಮ್ಮೆ ಟೂರ್ನಿ ಪಾಕ್​ನಲ್ಲಿಯೇ ನಡೆದು, ಭಾರತ ತಂಡ ಪಾಲ್ಗೊಳ್ಳಲಿದ್ದರೆ ಆಗ 9ನೇ ಸ್ಥಾನಿಯಾಗಿರುವ ಶ್ರೀಲಂಕಾಗೆ ಅವಕಾಶ ಸಿಗಲಿದೆ. ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಟೂರ್ನಿಯ ಆತಿಥೇಯ ದೇಶಕ್ಕೆ ನೇರವಾಗಿ ಅರ್ಹತೆ ಸಿಗುತ್ತದೆ. ಒಟ್ಟು 8 ತಂಡಗಳು ಅರ್ಹತೆ ಪಡೆದಿದೆ. ಇದೀಗ ಭಾರತ ಟೂರ್ನಿಯಿಂದ ಹಿಂದೆ ಸರಿದರೆ ಲಂಕಾಗೆ ಅವಕಾಶ ಸಿಗಲಿದೆ.

ಇದನ್ನೂ ಓದಿ IND vs BNG: ಚೆನ್ನೈಗೆ ಆಗಮಿಸಿದ ಟೀಮ್‌ ಇಂಡಿಯಾ

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತದಲ್ಲಿ ಡಿಸೆಂಬರ್ 2012 ರಿಂದ ಜನವರಿ 2013 ರವರೆಗಿನ ದ್ವಿಪಕ್ಷೀಯ ಸರಣಿಯು ಎರಡು ರಾಷ್ಟ್ರಗಳ ನಡುವಿನ ಅಂತಿಮ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ಬಳಿಕ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತವೆ.

ಕಳೆದ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿದ್ದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ಪಾಕ್​ಗೆ ಹೋಗಲು ಒಪ್ಪದ ಕಾರಣ ಹೈಬ್ರೀಡ್​ ಮಾದರಿಯಲ್ಲಿ ಪಾಕ್​ ಮತ್ತು ಶ್ರೀಲಂಕಾದಲ್ಲಿ ಆಡಿಸಲಾಗಿತ್ತು. ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು.