Friday, 13th December 2024

ಕಾಮನ್‌ ವೆಲ್ತ್ ಕ್ರೀಡಾಕೂಟಕ್ಕೆ ನಿಖತ್ ಜರೀನ್‌, ಲವ್ಲಿನಾ ಬೊರ್ಗೋಹೈನ್

Commonwealth

ನವದೆಹಲಿ: ಹಾಲಿ ವಿಶ್ವ ಚಾಂಪಿಯನ್‌ ನಿಖತ್ ಜರೀನ್‌ ಮತ್ತು ಒಲಿಂಪಿಕ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೋಹೈನ್ ಕಾಮನ್‌ ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಬಾಕ್ಸಿಂಗ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಆಯ್ಕೆ ಟ್ರಯಲ್ಸ್‌ನ 50 ಕೆಜಿ ವಿಭಾಗದಲ್ಲಿ ನಿಖತ್‌ 7-0ಯಿಂದ ಮೀನಾಕ್ಷಿ ಅವರನ್ನು ಪರಾಭವಗೊಳಿಸಿದರು. 70 ಕೆಜಿ ವಿಭಾಗದ ಬೌಟ್‌ನಲ್ಲಿ ಲವ್ಲಿನಾ ಕೂಡ ಇಷ್ಟೇ ಅಂತರದಿಂದ ಪೂಜಾ ಸವಾಲು ಮೀರಿದರು. ಕಳೆದ ತಿಂಗಳ 52 ಕೆಜಿ ವಿಭಾಗದಲ್ಲಿ ನಿಖತ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ನೀತು ಗಂಗಾಸ್‌ (48 ಕೆಜಿ) ಮತ್ತು ಜಾಸ್ಮಿನ್‌ ಲಂಬೊರಿಯಾ (60 ಕೆಜಿ) ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾದ ಇನ್ನಿಬ್ಬರು ಬಾಕ್ಸರ್‌ಗಳು.

ನೀತು 5-2ರಿಂದ ಮಂಜು ರಾಣಿ ಅವರನ್ನು ಮಣಿಸಿದರು. ಏಷ್ಯನ್ ಯೂತ್ ಚಾಂಪಿ ಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದ ಜಾಸ್ಮಿನ್‌ ಅವರು ಪರ್ವೀನ್ ಹೂಡಾ ಅವರಿಗೆ ಸೋಲುಣಿಸಿದರು.

ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28ರಿಂದ ಆಗಸ್ಟ್‌ 8ರವರೆಗೆ ಕೂಟ ನಡೆಯಲಿದೆ. 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ತಂಡವು ತಲಾ ಮೂರು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು.