ಬೆಂಗಳೂರು: ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಗೆ ಇದೀಗ ಕರೋನಾ ವೈರಸ್ ಭೀತಿ ಶುರುವಾಗಿದ್ದು, ಪಟನಾ ಪೈರೇಟ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡದ ಕೆಲ ಆಟಗಾರರಿಗೆ ಕರೋನಾ ಸೋಂಕು ದೃಢಪಟ್ಟಿದೆ.
ಇದರಿಂದಾಗಿ ಕೆಲ ಪಂದ್ಯ ಮುಂದೂಡಿಕೆಯಾಗಿವೆ. ಪಟನಾ ಪೈರೇಟ್ಸ್ ತಂಡ ಜನವರಿ 18ರಂದು ತನ್ನ ಕೊನೇ ಪಂದ್ಯ ಆಡಿದ್ದರೆ, ಗುಜರಾತ್ ಜೈಂಟ್ಸ್ ತಂಡ ಜನವರಿ 20ರಂದು ಕೊನೇ ಪಂದ್ಯ ಆಡಿತ್ತು.
ಇವೆರಡು ತಂಡಗಳಿಗೆ ಸದ್ಯ ಕಣಕ್ಕಿಳಿಸಲು ಬೇಕಾದ ಕನಿಷ್ಠ ಆಟಗಾರರೂ ಲಭ್ಯರಿಲ್ಲದ ಕಾರಣ ಟೂರ್ನಿಯ ವೇಳಾಪಟ್ಟಿ ಅಲ್ಪ ಬದಲಾವಣೆ ಕಂಡಿದ್ದು, ಶುಕ್ರವಾರದವರೆಗೆ ಪ್ರತಿದಿನ ಕೇವಲ 1 ಪಂದ್ಯವಷ್ಟೇ ನಡೆಯಲಿದೆ. ಪಂದ್ಯ ರಾತ್ರಿ 7.30ಕ್ಕೆ ಆರಂಭಗೊಳ್ಳಲಿದ್ದು, ಮುಂದಿನ ಶನಿವಾರ ಮತ್ತು ಭಾನುವಾರ ತಲಾ 2 ಪಂದ್ಯಗಳಷ್ಟೇ ನಡೆಯಲಿವೆ ಎಂದು ಹೇಳಲಾಗಿದೆ.