ನವದೆಹಲಿ: ಭಾರತೀಯ ಕ್ರಿಕೆಟ್‌ನ ಲೆಗ್ ಸ್ಪಿನ್ನರ್ ರಾಹುಲ್ ಚಹರ್ (Rahul Chahar) ವಿಚ್ಛೇದನ ಪಡೆದಿದ್ದಾರೆ. ಈ ಸುದ್ದಿಯನ್ನು ಅವರೇ ಸ್ವತಃ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬಹಿರಂಗವಾಗಿ ಹಂಚಿಕೊಂಡಿದ್ದಾರೆ. 26ನೇ ವಯಸ್ಸಿನ ರಾಹುಲ್ ಚಹರ್ 2022 ರಲ್ಲಿ ಇಶಾನಿ ಜೋಹರ್ (Ishani Johar) ಅವರನ್ನು ವಿವಾಹವಾಗಿದ್ದರು. ಅವರು ಭಾರತ ತಂಡದ ಒಂದು ಏಕದಿನ ಮತ್ತು ಆರು ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಅವರು 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಭಾಗವಾಗಿದ್ದರು. ಅವರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ತಮ್ಮ ನೂತನ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕೆ ಇಳಿಯಲಿದ್ದಾರೆ.
ರಾಹುಲ್ ಚಹರ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, "ನಾನು ನನ್ನನ್ನು, ನನ್ನ ಮೌಲ್ಯವನ್ನು ಅಥವಾ ನಾನು ನಿಜವಾಗಿಯೂ ಬಯಸಿದ ಜೀವನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮೊದಲೇ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದೆ. ನಂತರದ ವರ್ಷಗಳು ನಾನು ಎಂದಿಗೂ ನಿರೀಕ್ಷಿಸದ ಪಾಠಗಳಿಂದ ತುಂಬಿವೆ. ಕಳೆದ 15 ತಿಂಗಳುಗಳನ್ನು ನ್ಯಾಯಾಲಯದಲ್ಲಿ ಕಳೆದಿದ್ದೇನೆ, ನನಗೆ ತಾಳ್ಮೆ, ಧೈರ್ಯ ಮತ್ತು ಕೆಲವು ಜನರಿಗೆ ನಿಜವಾಗಿಯೂ ಅಗತ್ಯವಿರುವ ಶಕ್ತಿಯನ್ನು ಕಲಿಸಿದೆ," ಎಂದು ಬರೆದುಕೊಂಡಿದ್ದಾರೆ.
ಪಾಕ್ ಆಟಗಾರರನ್ನು ನಿರ್ಬಂಧಿಸುವ ಐಪಿಎಲ್ ಮಾಲೀಕರಿಗೆ ಕಡಿವಾಣ ಹಾಕಿ: ಮೈಕಲ್ ವಾನ್ ಆಗ್ರಹ!
"ಇಂದು ನನ್ನ ಜೀವನದ ಆ ಅಧ್ಯಾಯವು ಅಧಿಕೃತವಾಗಿ ಕೊನೆಗೊಳ್ಳುತ್ತದೆ. ಸರಿಯಾದ ಕಾನೂನು ಪ್ರಕ್ರಿಯೆಯನ್ನು ಅನುಸರಿಸಿದ ನಂತರ, ನನ್ನ ನಿರ್ಣಯದೊಂದಿಗೆ ವಿಷಯವು ಪರಿಹರಿಸಲ್ಪಟ್ಟಿದೆ. ಇದು ಭಾರೀ ಬೆಲೆಯನ್ನು ತೆತ್ತಿತು, ನನ್ನ ಜೀವನದ ಈ ಹಂತವನ್ನು ಕೊನೆಗೊಳಿಸಿತು. ನಾನು ಈ ಅಧ್ಯಾಯವನ್ನು ಕೋಪ ಅಥವಾ ವಿಷಾದದಿಂದಲ್ಲ ಆದರೆ ಸ್ಪಷ್ಟತೆಯೊಂದಿಗೆ ಕೊನೆಗೊಳಿಸುತ್ತಿದ್ದೇನೆ," ಎಂದು ಹೇಳಿದ್ದಾರೆ.
ರಾಹುಲ್ ಚಹರ್ ಮತ್ತು ಫ್ಯಾಷನ್ ಡಿಸೈನರ್ ಇಶಾನಿ ಜೋಹರ್ ದೀರ್ಘಕಾಲ ರಿಲೇಷನ್‌ಶಿಪ್‌ನಲ್ಲಿದ್ದರು. ಅವರು 2019ರ ಡಿಸೆಂಬರ್ 12 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರಾಹುಲ್ ಅವರನ್ನು ಬೆಂಬಲಿಸಲು ಇಶಾನಿ ಆಗಾಗ್ಗೆ ಅವರ ಐಪಿಎಲ್ ಪಂದ್ಯಗಳಿಗೆ ಹಾಜರಾಗುತ್ತಿದ್ದರು. ಅವರು 2022ರ ಮಾರ್ಚ್ 9 ರಂದು ಗೋವಾದಲ್ಲಿ ವಿವಾಹವಾಗಿದ್ದರು. ಅವರ ಮದುವೆಗೆ ಅನೇಕ ಕ್ರಿಕೆಟಿಗರು ಹಾಜರಿದ್ದರು.
ರಾಹುಲ್ ಚಹರ್ ಬಗ್ಗೆ ಹೇಳುವುದಾದರೆ, ಅವರು 2016ರಲ್ಲಿ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ರಾಜಸ್ಥಾನ ಪರ ದೇಶಿ ಕ್ರಿಕೆಟ್ ಆಡುತ್ತಾರೆ. ಆ ಸಮಯದಲ್ಲಿ ಅವರಿಗೆ ಕೇವಲ 17 ವರ್ಷ ವಯಸ್ಸಾಗಿತ್ತು. 2019ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ನಂತರ, ಅವರು ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
ಲೆಗ್ ಸ್ಪಿನ್ನರ್ 2026ರ ಐಪಿಎಲ್ ಮಿನಿ ಹರಾಜಿನಲ್ಲಿ 5.20 ಕೋಟಿ ರು. ಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು. ಆರಂಭದಲ್ಲಿ ಹರಾಜಿನಲ್ಲಿ ಮಾರಾಟವಾಗದೇ ಉಳಿದಿದ್ದ ಅವರು, ನಂತರದ ಸುತ್ತಿನಲ್ಲಿ ಆಯ್ಕೆಯಾದರು. 2025ರ ಐಪಿಎಲ್ ಟೂರ್ನಿಯಲ್ಲಿ ಅವರು ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದರು. ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಚಹರ್, ರೈಸಿಂಗ್ ಪುಣೆ ಜಯಂಟ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದಾರೆ.