Saturday, 14th December 2024

ಗೆಲುವಿನ ಟ್ರ‍್ಯಾಕ್’ಗೆ ಮರಳಿದ ಮಹಿ ಪಡೆ

ದುಬೈ: ಐಪಿಎಲ್ ಟೂರ್ನಿಯಲ್ಲಿ ಸೋಲಿನ ಸುಳಿಗೆ ಸುಲುಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವಿನ ಟ್ರ್ಯಾಕ್ ಮರಳಿದ್ದು, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 20 ರನ್ ಗಳ ಜಯ ಸಾಧಿಸಿದೆ.

ಚೆನ್ನೈ ನೀಡಿದ್ದ 168 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾ ಬಾದ್ ತಂಡ 8 ವಿಕೆಟ್ ನಷ್ಟಕ್ಕೆ 147 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಚೆನ್ನೈ ಎದುರು 20 ರನ್ ಗಳ ಅಂತರದಲ್ಲಿ ಶರಣಾಯಿತು. ಹೈದರಾಬಾದ್ ಪರ ಕೇನ್ ವಿಲಿಯಮ್ಸನ್ (57 ರನ್) ಮತ್ತು ಜಾನಿ ಬೇರ್ ಸ್ಟೋ (23 ರನ್)ರನ್ನು ಹೊರತು ಪಡಿಸಿದರೆ, ಉಳಿದಾವ ಆಟಗಾರರೂ ಪ್ರತಿರೋಧ ತೋರಲೇ ಇಲ್ಲ. ಚೆನ್ನೈ ಪರ ಕರಣ್ ಶರ್ಮಾ ಮತ್ತು ಡ್ವೇಯ್ನ್ ಬ್ರಾವೋ ತಲಾ 2 ವಿಕೆಟ್ ಉರುಳಿಸಿ ಹೈದಾರಾಬಾದ್ ಗೆ ಮರ್ಮಾಘಾತ ನೀಡಿದರು. ಉಳಿದಂತೆ ಸ್ಯಾಮ್ ಕರನ್, ರವೀಂದ್ರ ಜಡೇಜಾ ಮತ್ತು ಶಾರ್ದುಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಆರಂಭಿಕ ಆಘಾತ ಎದುರಿಸಿತು. ಮೊದಲ ಎಸೆತದಲ್ಲೇ ಡುಪ್ಲೆಸಿಸ್ ಸಂದೀಪ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಸ್ಯಾಮ್ ಕರನ್ (31 ರನ್) ಮತ್ತು ಶೇನ್ ವಾಟ್ಸನ್ (42) ಜೋಡಿ ಚೆನ್ನೈ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿತು. ಬಳಿಕ ಅಂಬಾಟಿ ರಾಯುಡು (41 ರನ್), ಮಹೇಂದ್ರ ಸಿಂಗ್ ಧೋನಿ (21 ರನ್) ಮತ್ತು ರವೀಂದ್ರ ಜಡೇಜಾ (ಅಜೇಯ 25 ರನ್) ಚೆನ್ನೈ ಸವಾಲಿನ ಮೊತ್ತ ಪೇರಿಸಲು ನೆರವಾದರು.

ಬೌಲಿಂ‌ಗಿನಲ್ಲಿ ಒಂದು ವಿಕೆಟ್ ಮತ್ತು ೨೫ ರನ್ ಬಾರಿಸಿದ ಆಲ್ರೌಂಡರ್‌ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.