Wednesday, 11th December 2024

ಕೆಕೆಆರ್ ಕನಸು ಭಗ್ನ: ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್

ದುಬೈ: ಐಪಿಎಲ್ 14ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 27 ರನ್ ಜಯಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದ್ದು, ಕೆಕೆಆರ್ ಗೆ ಮೂರನೇ ಪ್ರಶಸ್ತಿಯ ಕನಸು ಭಗ್ನವಾಗಿದೆ.

ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 27 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿಗೆ ಮುತ್ತಿಕ್ಕಿದೆ. 2010, 2011, 2018 ಮತ್ತು 2021ರಲ್ಲಿ ಚೆನ್ನೈ ತಂಡ ಐಪಿಎಲ್ ಚಾಂಪಿಯನ್ ಆಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಚೆನ್ನೈ ತಂಡವು ಫಫ್ ಡುಪ್ಲೆಸಿ (86) ಬಿರುಸಿನ ಅರ್ಧಶತಕ ನೆರವಿನಿಂದ ಮೂರು ವಿಕೆಟ್ ನಷ್ಟಕ್ಕೆ 192 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಋತುರಾಜ್ ಗಾಯಕವಾಡ್ (32), ರಾಬಿನ್ ಉತ್ತಪ್ಪ (31) ಹಾಗೂ ಮೊಯಿನ್ ಅಲಿ (37*) ಜೊತೆಗೆ ತಲಾ ಅರ್ಧಶತಕ ಗಳ ಜೊತೆಯಾಟ ಕಟ್ಟಿದ ಡುಪ್ಲೆಸಿ 100ನೇ ಐಪಿಎಲ್ ಪಂದ್ಯವನ್ನು ಸ್ಮರಣೀಯವಾಗಿಸಿದರು.

ಬಳಿಕ ಗುರಿ ಬೆನ್ನತ್ತಿದ ಕೋಲ್ಕತ್ತ, ಆರಂಭಿಕರಾದ ವೆಂಕಟೇಶ್ ಅಯ್ಯರ್ (50) ಹಾಗೂ ಶುಭಮನ್ ಗಿಲ್ (51) ಆಕರ್ಷಕ ಅರ್ಧಶತಕಗಳ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ ಗಿಲ್-ಅಯ್ಯರ್ ಹೋರಾಟವು ವ್ಯರ್ಥವೆನಿಸಿತು.

ವೆಂಕಟೇಶ್ ಅಯ್ಯರ್ ಸುಲಭ ಕ್ಯಾಚ್ ಮಹೇಂದ್ರ ಸಿಂಗ್ ಧೋನಿ ಕೈಚೆಲ್ಲಿರುವುದು ಆರಂಭದಲ್ಲೇ ಮುಳುವಾಗಿ ಪರಿಣಮಿಸಿತು. ಸ್ಫೋಟಕ ಆಟವಾಡಿದ ಅಯ್ಯರ್ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು.

ಈ ನಡುವೆ ಶುಭಮನ್ ಗಿಲ್ ಜೀವದಾನ ಪಡೆದರು. ರವೀಂದ್ರ ಜಡೇಜ ಅವರ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಗಿಲ್ ಅವರ ಕ್ಯಾಚ್ ಅನ್ನು ಅಂಬಟಿ ರಾಯುಡು ಹಿಡಿದಿದ್ದರು. ಆದರೆ ಸ್ಪೈಡರ್‌ ಕ್ಯಾಮೆರಾದ ಕೇಬಲ್‌ಗೆ ಚೆಂಡು ತಗುಲಿದ ಹಿನ್ನೆಲೆಯಲ್ಲಿ ‘ಡೆಡ್ ಬಾಲ್’ ಎಂದು ಘೋಷಿಸಲಾಯಿತು.

ಆದರೆ 11ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್, ಅಪಾಯಕಾರಿ ಅಯ್ಯರ್ ಜೊತೆಗೆ ನಿತೀಶ್ ರಾಣಾ (0) ವಿಕೆಟ್ ಪಡೆಯುವ ಮೂಲಕ ಡಬಲ್ ಆಘಾತ ನೀಡಿದರು. 32 ಎಸೆತಗಳನ್ನು ಎದುರಿಸಿದ ಅಯ್ಯರ್ ಐದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. ಅಲ್ಲದೆ ಮೊದಲ ವಿಕೆಟ್‌ಗೆ ಗಿಲ್ ಜೊತೆಗೆ 91 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಅತ್ತ ಅರ್ಧಶತಕದ ಬೆನ್ನಲ್ಲೇ ಶುಭಮನ್ ಗಿಲ್ ಸಹ ವಿಕೆಟ್ ಪತನವಾಯಿತು. 43 ಎಸೆತಗಳನ್ನು ಎದುರಿಸಿದ ಗಿಲ್ ಆರು ಬೌಂಡರಿಗಳ ನೆರವಿನಿಂದ 51 ರನ್ ಗಳಿಸಿದರು.

ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ದಿನೇಶ್ ಕಾರ್ತಿಕ್ (9) ಹಾಗೂ ಶಕಿಬ್ ಅಲ್ ಹಸನ್ (0) ಹೊರದಬ್ಬಿದ ರವೀಂದ್ರ ಜಡೇಜ, ಆಘಾತ ನೀಡಿದರು. ಪರಿಣಾಮ ಕೆಕೆಆರ್ 119ಕ್ಕೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಸಮರ್ಥವಾಯಿತು. ಇನ್ನುಳಿ ದಂತೆ ನಾಯಕ ಏಯಾನ್ ಮಾರ್ಗನ್ (4), ರಾಹುಲ್ ತ್ರಿಪಾಠಿ (2) ಲಾಕಿ ಫರ್ಗ್ಯುಸನ್ (18), ಶಿವಂ ಮಾವಿ (20) ರನ್ ಗಳಿಸಿದರು.

ಸಿಎಸ್‌ಕೆ ಪರ ಶಾರ್ದೂಲ್ ಠಾಕೂರು ಮೂರು ಮತ್ತು ರವೀಂದ್ರ ಜಡೇಜ ಹಾಗೂ ಜೋಶ್ ಹ್ಯಾಜಲ್‌ವುಡ್ ತಲಾ ಎರಡು ವಿಕೆಟ್‌ಗಳನ್ನು ಹಂಚಿದರು.

ಈ ಮೊದಲು ಚೆನ್ನೈ ತಂಡಕ್ಕೆ ಋತುರಾಜ್ ಗಾಯಕವಾಡ್ ಹಾಗೂ ಫಾಫ್ ಡುಪ್ಲೆಸಿ ಉತ್ತಮ ಆರಂಭವೊದಗಿಸಿ ದರು. ಇವರಿಬ್ಬರು ಮೊದಲ ವಿಕೆಟ್‌ಗೆ 8.1 ಓವರ್‌ಗಳಲ್ಲಿ 61 ರನ್‌ಗಳ ಜೊತೆಯಾಟ ಕಟ್ಟಿದರು. ಈ ಹಂತದಲ್ಲಿ 32 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಗಾಯಕವಾಡ್ ಅವರನ್ನು ಸುನಿಲ್ ನಾರಾಯಣ್ ಹೊರದಬ್ಬಿದರು.

10 ಓವರ್ ಅಂತ್ಯಕ್ಕೆ ಚೆನ್ನೈ ಒಂದು ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿತ್ತು. ಅತ್ತ ಆಕ್ರಮಣಕಾರಿ ಇನ್ನಿಂಗ್ಸ್ ಬೆಳೆಸಿದ ಡುಪ್ಲೆಸಿ ಕೇವಲ 35 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಇದರೊಂದಿಗೆ 100ನೇ ಐಪಿಎಲ್ ಪಂದ್ಯವನ್ನು ಸ್ಮರಣೀಯವಾಗಿಸಿದರು.

ಅಲ್ಲದೆ ರಾಬಿನ್ ಉತ್ತಪ್ಪ ಜೊತೆಗೂ 25 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಅತ್ತ ಉತ್ತಪ್ಪ ಕೇವಲ 15 ಎಸೆತಗಳಲ್ಲಿ ಮೂರು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಮೊಯಿನ್ ಅಲಿ ಜೊತೆ ಸೇರಿದ ಡುಪ್ಲೆಸಿ ಮಗದೊಂದು ಬಿರುಸಿನ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಈ ಮೂಲಕ ಎಲ್ಲ ಮೂವರು ಬ್ಯಾಟರ್‌ಗಳೊಂದಿಗೆ (ಗಾಯಕವಾಡ್, ಉತ್ತಪ್ಪ, ಮೊಯಿನ್) ಜೊತೆಗೆ ಅರ್ಧಶತಕಗಳ ಜೊತೆಯಾಟವನ್ನು ಬೆಳೆಸಿದರು.

ಕೆ.ಎಲ್. ರಾಹುಲ್ ಹಿಂದಿಕ್ಕಿದ ಗಾಯಕವಾಡ್ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಗರಿಷ್ಠ ರನ್ (635) ಸರದಾರ ಎನಿಸಿದರು. ಈ ಮೂಲಕ ‘ಆರೆಂಜ್ ಕ್ಯಾಪ್‌’ಗೆ ಭಾಜನರಾದರು.