ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಸದ್ಯದ ಪರಿಸ್ಥಿತಿಯಲ್ಲಿ ಅಂಕಪಟ್ಟಿಯ ತಳಕ್ಕೆ ಜಾರಿದೆ. ಅವತ್ತು ಸೋತಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಹೊಸ್ತಿಲಿಗೆ ಬಂದು ನಿಂತಿದೆ.
ಎರಡೂ ತಂಡಗಳು ಶುಕ್ರವಾರ ಮುಖಾಮುಖಿಯಾಗಲಿವೆ. ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿರುವ ಮುಂಬೈ ಆರರಲ್ಲಿ ಗೆದ್ದು, ಮೂರರಲ್ಲಿ ಸೋತಿದೆ. ಆದರೆ ಮಹೇಂದ್ರಸಿಂಗ್ ಧೋನಿ ಬಳಗವು ಹತ್ತು ಪಂದ್ಯಗಳನ್ನು ಆಡಿ ಮೂರು ಗೆದ್ದು, ಏಳರಲ್ಲಿ ಸೋತಿದೆ. ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಹೀಗಾಗಿ, ಧೋನಿ ಪಡೆಗೆ ತಾವಾಡಲಿರುವ ಪಂದ್ಯಗಳಿಂದ ಉಳಿದ ತಂಡ ಗಳ ಅಂಕಪಟ್ಟಿಯಲ್ಲಿ ವ್ಯತ್ಯಾಸ ತರುವ ಅವಕಾಶವಿದೆ.
ಈಗಾಗಲೇ ಮೊದಲ ನಾಲ್ಕು ಸ್ಥಾನಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ‍್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ‍್ಸ್ ತಂಡಗಳಿವೆ. ಇವುಗಳ ಪೈಕಿ, ಕೋಲ್ಕತಾ ತಂಡ ಅಗ್ರ ನಾಲ್ಕರ ಸ್ಥಾನ ಕಾಪಾಡಿಕೊಳ್ಳುವುದು ಉಳಿದ ಪಂದ್ಯಗಳ ಫಲಿತಾಂಶಗಳ ಮೇಲೆ ಅವಲಂಬಿಸಿದೆ.