Wednesday, 11th December 2024

ಪಂಜಾಬಿಗೆ ’ಹೂಡಾ’ ಆಧಾರ, ಚೆನ್ನೈಗೆ 154 ರನ್‌ ಗೆಲುವಿನ ಗುರಿ

ಅಬುಧಾಬಿ: ಕಿಂಗ್ಸ್ ಪಂಜಾಬ್ ತಂಡಕ್ಕೆ ದೀಪಕ್ ಹೂಡಾ ಅಕ್ಷರಸಃ ಆಪತ್ಭಾಂಧವನಾಗಿ ಮೂಡಿ ಬಂದರು. ಹೂಡಾ ಅವರ ಅರ್ಧಶತಕದ ನೆರವಿನಿಂದ ಚೆನ್ನೈಗೆ ಸವಾಲೆಸೆಯುವ ಮೊತ್ತ ಪೇರಿಸುವಲ್ಲಿ ರಾಹುಲ್ ಪಡೆ ಯಶಸ್ವಿಯಾಗಿದೆ.

ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪಂಜಾಬಿಗೆ ನಾಯಕ ಕೆ.ಎಲ್.ರಾಹುಲ್ ಹಾಗೂ ಮಾಯಂಕ್ ಅಗರ್ವಾಲ್‌ ಮೊದಲ ವಿಕೆಟ್‌ಗೆ 48 ರನ್ನುಗಳ ಜತೆಯಾಟ ನೀಡಿದರು. ಇವರ ಜೋಡಿಯನ್ನು ಮುರಿದ ವೇಗಿ ಲುಂಗಿ ಎನ್‌ಜಿಡಿ ಆರಂಭಿಕರಿಬ್ಬರನ್ನು ಪೆವಿಲಿಯನ್‌ಗೆ ಕಳಿಸಿದರು. ಬಳಿಕ ಯಾವುದೇ ಆಟಗಾರ ನಿಂತು ಆಟುವ ಲಕ್ಷಣ ತೋರಲಿಲ್ಲ.

ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಕೂಡ ತಂಡದ ಮೊತ್ತ ಏರಿಸುವ ಜವಾಬ್ದಾರಿ ವಹಿಸಿಕೊಂಡರು. ಇವರು ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ ನೆರವಿನಿಂದ 62 ರನ್ ಗಳಿಸಿ ಅಜೇಯರಾಗುಳಿದರು. ಇವರಿಗೆ ಮಂದೀಪ್ ಸಿಂಗ್ ಜತೆ ನೀಡಿದರು.

ಚೆನ್ನೈ ಪರ ಲುಂಗಿ ಮೂರು ವಿಕೆಟ್ ಕಿತ್ತರು. ಅಂತಿಮವಾಗಿ ಆರು ವಿಕೆಟ್ ನಷ್ಟದಲ್ಲಿ 153 ಪೇರಿಸಿದ ಪಂಜಾಬ್ ತಂಡ , ಚೆನೈಗೆ 154 ರನ್ನುಗಳ ಗುರಿ ನೀಡಿದೆ.