Friday, 13th December 2024

ಜಡೇಜಾ ಸತತ ’ಸಿಕ್ಸರ್’ನಲ್ಲಿ ಮಿಂದ ಚೆನ್ನೈ’ಗೆ ಗೆಲುವಿನ ಸಂಭ್ರಮ

ದುಬೈ: ಎಡಗೈ ಬ್ಯಾಟ್ಸ್‌ಮನ್ ರವೀಂದ್ರ ಜಡೇಜ ಗಳಿಸಿದ ಸತತ ಸಿಕ್ಸರ್‌ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪ್ಲೇ ಆಫ್ ಕನಸನ್ನು ನುಚ್ಚುನೂರು ಮಾಡಿದವು. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಸಂಭ್ರಮದಲ್ಲಿ ಮಿಂದಿತು.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ 173 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಋತುರಾಜ್ ಗಾಯಕ ವಾಡ್ (72) ಮೋಹಕ ಬ್ಯಾಟಿಂಗ್ ಮಾಡಿ ಉತ್ತಮ ಅಡಿಪಾಯ ಹಾಕಿದ್ದರು. ಅಂತಿಮ ಓವರ್‌ನಲ್ಲಿ ಗೆಲುವಿಗೆ 10 ರನ್‌ಗಳು ಬೇಕಾಗಿದ್ದವು. ಕಮಲೇಶ್ ನಾಗರಕೋಟಿ ಹಾಕಿದ ಓವರ್‌ನಲ್ಲಿ ಸಿಕ್ಸರ್‌ಗಳನ್ನು ಸಿಡಿಸಿ ಜಡೇಜ (31) ಆರು ವಿಕೆಟ್‌ಗಳ ಜಯ ಗಳಿಸಿಕೊಟ್ಟರು.

ಇದಕ್ಕೂ ಮುನ್ನ ಟಾಸ್ ಗೆದ್ದ ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಅವರ ದಿಟ್ಟ ಬ್ಯಾಟಿಂಗ್‌ನಿಂದಾಗಿ ಕೋಲ್ಕತ್ತ ಸವಾಲಿನ ಮೊತ್ತ ಪೇರಿಸಿತು.

ಶುಭಮನ್ ಗಿಲ್ (26) ಮತ್ತು ನಿತೀಶ್ ರಾಣಾ (87) ಮೊದಲ ಏಳು ಓವರ್‌ಗಳಲ್ಲಿ ತಂಡದ ಮೊತ್ತವನ್ನು ಅರ್ಧಶತಕದ ಗಡಿ ದಾಟಿಸಿದರು. ಸ್ಪಿನ್ನರ್ ಕರ್ಣ ಶರ್ಮಾ ಎಂಟನೇ ಓವರ್‌ನಲ್ಲಿ ಜೊತೆಯಾಟ ಮುರಿದರು. ಸುನಿಲ್ ನಾರಾಯಣ್, ರಿಂಕು ಸಿಂಗ್ ಆವರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಆದರೆ ರಾಣಾ ಮಾತ್ರ ತಮ್ಮ ತೋಳ್ಬಲ ಪ್ರದರ್ಶಿಸಿದರು. ಅವರ ಆಟದಲ್ಲಿ ತಾಳ್ಮೆ ಇತ್ತು. ಏಕಾಗ್ರತೆಯೂ ಮೇಳೈಸಿತ್ತು. 44 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮಾರ್ಗನ್ ಜೊತೆಗೆ ನಾಲ್ಕನೇ ವಿಕೆಟ್ ಜೊತೆ ಯಾಟದಲ್ಲಿ ಅವರು 44 ರನ್ ಗಳಿಸಿದರು.

ಶತಕದ ಹಾದಿಯಲ್ಲಿದ್ದ ನಿತೀಶ್ 18ನೇ ಓವರ್‌ನಲ್ಲಿ ಲುಂಗಿ ಗಿಡಿ ಎಸೆತದಲ್ಲಿ ಸ್ಯಾಮ್ ಕರನ್‌ಗೆ ಕ್ಯಾಚಿತ್ತು ಮರಳಿದರು. ಮಾರ್ಗನ್ ಜೊತೆಗೂಡಿದ ನಿಕಟಪೂರ್ವ ನಾಯಕ ದಿನೇಶ್ ಕಾರ್ತಿಕ್ ಐದನೇ ವಿಕೆಟ್ ಜೊತೆಯಾಟದಲ್ಲಿ 30 ರನ್‌ ಸೇರಿಸಿದರು. ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ನಾಯಕ ಏಯಾನ್ ಮಾರ್ಗನ್ ಔಟಾದರು.