Friday, 13th December 2024

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿಗೆ ವೀರೋಚಿತ ಸೋಲು

ಬೆಂಗಳೂರು: ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಸಿಡಿಲಬ್ಬರದ ಬ್ಯಾಟಿಂಗ್ ಹೊರಾಟದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಪಂದ್ಯದಲ್ಲಿ 8 ರನ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವೀರೋಚಿತ ಸೋಲುಂಡಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ರನ್ ಚೇಸ್ ಮಾಡಲು ನಿರ್ಧರಿಸಿದ ಆರ್ ಸಿಬಿ ಭರ್ಜರಿಯಾಗಿ ಚೇಸ್ ಮಾಡಿ ದರೂ ಕೊನೆಯ ಹಂತದಲ್ಲಿ ಎಡವಿ ಸೋಲುಂಡಿತು.

ಚೆನ್ನೈ ಸೂಪರ್ ಕಿಂಗ್ಸ್ ಒಡ್ಡಿದ 224 ರನ್ ಗಳ ಅಗಾಧ ಮೊತ್ತ ಬೆಂಬತ್ತಿದ ಆರ್ ಸಿಬಿ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದು ಕೊಂಡು 218 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್ ಸಿಬಿ ಮ್ಯಾಚ್ ಸೋತರೂ ವೀರೋಚಿತ ಹೋರಾಟದಿಂದ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಕಠಿಣ ಗುರಿ ಬೆಂಬತ್ತಿದ ಆರ್ ಸಿಬಿ ಆರಂಭದಲ್ಲೇ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ (6) ಮತ್ತು ಲೊಮ್ರೊರ್ (0) ವಿಕೆಟ್ ಕಳೆದುಕೊಂಡು ಕಂಗಾಲಾಯಿತು. ಈ ಹಂತದಲ್ಲಿ ಜೊತೆಯಾದ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಮೂರನೇ ವಿಕೆಟ್ ಗೆ 126 ರನ್ ಜೊತೆಯಾಟದಿಂದ ಗೆಲುವಿನ ಭರವಸೆ ಮೂಡಿಸಿದರು.

ಮ್ಯಾಕ್ಸ್ ವೆಲ್ 36 ಎಸೆತಗಳಲ್ಲಿ 3 ಬೌಂಡರಿ ಮತ್ತು 8 ಸಿಕ್ಸರ್ ಸೇರಿದ 76 ರನ್ ಚಚ್ಚಿದರೆ, ಫಾಫ್ ಡು ಪ್ಲೆಸಿಸ್ 33 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 62 ರನ್ ಸಿಡಿಸಿದರು. ಇವರಿಬ್ಬರು ನಿರ್ಗಮಿಸಿದ ನಂತರ ದಿನೇಶ್ ಕಾರ್ತಿಕ್ 28 ರನ್ ಬಾರಿಸಿ ಔಟಾದರು. ಇದರಿಂದ ಕೊನೆಯ ಹಂತದಲ್ಲಿ ಒತ್ತಡಕ್ಕೆ ಒಳಗಾಗಿ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿತು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆವೊನ್ ಕಾನ್ವೆ ಮತ್ತು ಶಿವಂ ದುಬೆ ಅಬ್ಬರದ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ಕಲೆ ಹಾಕಿತು.