Saturday, 14th December 2024

Danish Kaneria: ತಪ್ಪಿಯೂ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಬೇಡಿ ಎಂದ ಪಾಕ್‌ ಆಟಗಾರ!

Danish Kaneria

ಕರಾಚಿ: ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ(ICC Champions Trophy) ಭಾರತ ತಂಡವನ್ನು ಯಾವುದೇ ಕಾರಣಕ್ಕೂ ಪಾಕ್‌ಗೆ ಕಳುಹಿಸದಂತೆ ಬಿಸಿಸಿಐಗೆ ಸ್ವತಃ ಪಾಕ್‌ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ(Danish Kaneria) ಎಚ್ಚರಿಕೆ ನೀಡಿದ್ದಾರೆ. ಭಾರತ ತಂಡ  ಪಾಕ್‌ಗೆ ತೆರಳುವ ಬಗ್ಗೆ ಇದುವರೆಗೆ ಯಾವುದೇ ನಿಶ್ಚಿತತೆ ಇಲ್ಲ. ಆಟಗಾರರ ಭದ್ರತಾ ದೃಷ್ಟಿಯಿಂದ ಭಾರತವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಸಿದ್ಧವಿಲ್ಲ. ಆದರೆ, ಕೆಲ ಪಾಕ್‌ ಮಾಜಿ ಆಟಗಾರರು ನಾವು ತುಂಬಾ ಒಳ್ಳೆಯವರು, ಪಾಕಿಸ್ತಾನಕ್ಕೆ ಬನ್ನಿ ಎಂದು ಮನವಿಯನ್ನು ಮಾಡುತ್ತಲೇ ಇದ್ದಾರೆ. ಈ ಮಧ್ಯೆ ಕನೇರಿಯಾ ಮಾತ್ರ ತಪ್ಪಿಯೂ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಬಾರದು ಎಂದು ಹೇಳಿದ್ದಾರೆ.

ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಬಂದರೆ, ಪಾಕ್‌ ಕ್ರಿಕೆಟ್ ಮಂಡಳಿಗೆ ಭಾರಿ ಹಣದ ಹೊಳೆ ಹರಿದು ಬರಲಿದೆ. ಈಗಾಗಲೇ ನಷ್ಟದ ಹಾದಿಯಲ್ಲಿರುವ ಮಂಡಳಿ ಆರ್ಥಿಕವಾಗಿ ಅಭಿವೃದ್ಧಿಯಾಗಲಿದೆ. ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾಗೆ ಇರುವ ಕ್ರೇಜ್ ಮತ್ತು ಬೇಡಿಕೆ​ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಬರಬಾರದು ಎಂದು ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ.

ಇದನ್ನೂ ಓದಿ Paris Paralympics: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಡಬಲ್‌ ಪದಕ ಸಂಭ್ರಮ; ಚಿನ್ನ ಗೆದ್ದ ಅವನಿ, ಕಂಚು ಗೆದ್ದ ಮೋನಾ

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತದಲ್ಲಿ ಡಿಸೆಂಬರ್ 2012 ರಿಂದ ಜನವರಿ 2013 ರವರೆಗಿನ ದ್ವಿಪಕ್ಷೀಯ ಸರಣಿಯು ಎರಡು ರಾಷ್ಟ್ರಗಳ ನಡುವಿನ ಅಂತಿಮ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ಬಳಿಕ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತವೆ.
ಕಳೆದ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿದ್ದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ಪಾಕ್​ಗೆ ಹೋಗಲು ಒಪ್ಪದ ಕಾರಣ ಹೈಬ್ರೀಡ್​ ಮಾದರಿಯಲ್ಲಿ ಪಾಕ್​ ಮತ್ತು ಶ್ರೀಲಂಕಾದಲ್ಲಿ ಆಡಿಸಲಾಗಿತ್ತು. ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು.

https://youtu.be/gF7NStTVvs8

ಕರಾಚಿ ಮೂಲದ ದಾನಿಶ್ ಕನೇರಿಯಾ 2000ರಿಂದ 2010ರವರೆಗೆ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಸ್ಪಿನ್ ಬೌಲರ್ ಆಗಿ ಸೇವೆ ಸಲ್ಲಿಸಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ ಕನೇರಿಯಾ ಇಸ್ಲಾಂ ದೇಶದಲ್ಲಿ ತಾರತಮ್ಯ ಎದುರಿಸಿದ್ದರು. ಈ ವಿಚಾರವನ್ನು ಸ್ವತಃ ಅವರೇ ಹೇಳಿದ್ದರು. ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಇಸ್ಲಾಂಗೆ ಮತಾಂತರಗೊಳ್ಳಲು ಕೆಲವು ಸಹ ಆಟಗಾರರಿಂದ ಒತ್ತಾಯ ಬಂದಿತ್ತು ಎಂದು ದೂರಿದ್ದರು. ಕ್ರಿಕೆಟ್​ನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ ಎರಡನೇ ಹಿಂದೂ ಎಂಬ ಹೆಗ್ಗಳಿಕೆಗೆ ಕನೇರಿಯಾ ಅವರದ್ದು . ಟೆಸ್ಟ್ ಕ್ರಿಕೆಟ್​ನಲ್ಲಿ 250 ಕ್ಕೂ ಹೆಚ್ಚು ವಿಕೆಟ್​ಗಳ ಪ್ರಭಾವಶಾಲಿ ಪ್ರದರ್ಶನ ನೀಡಿದ್ದರು.

ಗೂಗ್ಲಿ ಬೌಲಿಂಗ್ ಮಾಡಬಲ್ಲ ಬಲಗೈ ಲೆಗ್ ಸ್ಪಿನ್ನರ್ ಆಗಿದ್ದ ಕನೇರಿಯಾ ಪಾಕಿಸ್ತಾನ ಪರ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 34.79 ಸರಾಸರಿಯಲ್ಲಿ 261 ವಿಕೆಟ್‌ ಪಡೆದುಕೊಂಡಿದ್ದಾರೆ. ಜತೆಗೆ 18 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಅವರು ತಮ್ಮ ಸೋದರ ಸಂಬಂಧಿ ಅನಿಲ್ ದಳಪತ್ ನಂತರ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ ಎರಡನೇ ಹಿಂದೂ ಮತ್ತು ಒಟ್ಟಾರೆಯಾಗಿ ಏಳನೇ ಮುಸ್ಲಿಮೇತರ ಆಟಗಾರರಾಗಿದ್ದರು.2012ರ ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ ಪಂದ್ಯಾವಳಿಯ ವೇಳೆ ಸ್ಪಾಟ್‌ ಫಿಕ್ಸಿಂಗ್‌ ನಡೆಸಿದ್ದು ಸಾಬೀತಾದ ಕಾರಣ ದಾನಿಶ್‌ ಕನೇರಿಯಾ ಅವರಿಗೆ ಪಿಸಿಬಿ ಆಜೀವ ಕ್ರಿಕೆಟ್‌ ನಿಷೇಧ ವಿಧಿಸಿತ್ತು. ಪಾಕಿಸ್ತಾನದಲ್ಲಿ ಐತಿಹಾಸಿಕ ಹಿಂದೂ ದೇಗುಲಗಳನ್ನು ನೆಲಸಮ ಮಾಡುತ್ತಿರುವ ಬಗ್ಗೆಯೂ ಕನೇರಿಯಾ ಧ್ವನಿ ಎತ್ತಿದ್ದರು.