ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಡಿಸೆಂಬರ್ 17 ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಅಹರ್ನಿಶಿ ಟೆಸ್ಟ್ ಪಂದ್ಯ ವೀಕ್ಷಿಸಲು ಪ್ರತಿದಿನ 27 ಸಾವಿರ ಪ್ರೇಕ್ಷಕರಿಗೆ ಅವಕಾಶ ನೀಡಲು ಆಯೋಜಕರು ತೀರ್ಮಾನಿಸಿದ್ದಾರೆನ್ನಲಾಗಿದೆ.
ಕ್ರೀಡಾಂಗಣದ ಒಟ್ಟು ಸಾಮರ್ಥ್ಯದಲ್ಲಿ ಶೇಕಡ 50 ಮಂದಿ ಪಂದ್ಯ ವೀಕ್ಷಿಸಲಿದ್ದಾರೆ. ಕರೊನಾ ವೈರಸ್ ಭೀತಿಯಿಂದಾಗಿ ಕ್ರಿಕೆಟ್ ಪಂದ್ಯಗಳು ಖಾಲಿ ಸ್ಟೇಡಿಯಂನಲ್ಲಿ ನಡೆಯುತ್ತಿವೆ. ಆದರೆ, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿ ವೀಕ್ಷಿಸಲು ಪ್ರೇಕ್ಷಕ ರಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.
ಐಪಿಎಲ್-13 ಮುಕ್ತಾಯಗೊಂಡ ಬೆನ್ನಲ್ಲೇ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಕ್ವಾರಂಟೈನ್ ಅವಧಿ ಬಳಿಕ ತಲಾ 3 ಏಕದಿನ, ಟಿ20 ಹಾಗೂ 4 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ನವೆಂಬರ್ 27 ರಂದು ಸಿಡ್ನಿಯಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ.
ಅಡಿಲೇಡ್ ಓವೆಲ್‌ನಲ್ಲಿ ಡಿ.17 ರಿಂದ ನಡೆಯಲಿರುವ ಪಂದ್ಯಕ್ಕೆ ಪ್ರತಿದಿನ ಶೇಕಡ 50 ಅಂದರೆ 27 ಸಾವಿರ ಮಂದಿಗೆ ಅವಕಾಶ ನೀಡಲಾಗುವುದು ಎಂದು ಸ್ಥಳೀಯ ಕ್ರಿಕೆಟ್ ವೆಬ್‌ಸೈಟ್‌ವೊಂದು ಪ್ರಕಟಿಸಿದೆ. ಅಡಿಲೇಡ್ ಟೆಸ್ಟ್ ಮುಕ್ತಾಯಗೊಂಡ ಬೆನ್ನಲ್ಲೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತವರಿಗೆ ವಾಪಸಾಗಲಿದ್ದಾರೆ. ವಿರಾಟ್-ಅನುಷ್ಕಾ ದಂಪತಿ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷಿಯಲ್ಲಿದ್ದಾರೆ. ಹೀಗಾಗಿ ಕೊಹ್ಲಿ ಪಿತೃತ್ವ ರಜೆ ಪಡೆದು ತವರಿಗೆ ವಾಪಸಾಗಲಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಇದುವರೆಗೂ ನಾಲ್ಕು ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳು ನಡೆದಿವೆ. ಭಾರತದಲ್ಲಿ ಇದುವರೆಗೂ ಏಕೈಕ ಟೆಸ್ಟ್ ಅಹರ್ನಿಶಿ ಟೆಸ್ಟ್ ನಡೆದಿದೆ. ಉಭಯ ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ (ಡಿ.26-30) ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ವಿಕ್ಟೋರಿಯಾ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪ್ರತಿದಿನ ಶೇಕಡ 25 ಮಂದಿಗೆ ಪಂದ್ಯ ವೀಕ್ಷಿಸಲು ಅನುವು ನೀಡಲಾಗುತ್ತಿದೆ.
ಜನವರಿ 7 ರಿಂದ ಸಿಡ್ನಿಯಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯಕ್ಕೆ ಪ್ರತಿದಿನ 23 ಸಾವಿರ ಅಥವಾ ಶೇಕಡ 50 ಮಂದಿಗೆ ಅವಕಾಶ ಕಲ್ಪಿಸಿದರೆ, ಬ್ರಿಸ್ಬೇನ್‌ನಲ್ಲಿ ನಡೆಯಲಿರುವ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಪ್ರತಿದಿನ 30 ಸಾವಿರ ಅಥವಾ ಶೇಕಡ 75 ಮಂದಿಗೆ ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗುತ್ತಿದೆ ಎಂದು ವರದಿಯಾಗಿದೆ.