Saturday, 14th December 2024

Deepthi Jeevanji: ಗ್ರಾಮಸ್ಥರಿಂದ ಹುಚ್ಚಿ, ಕೋತಿ ಎಂದು ಅವಮಾನ ಎದುರಿಸಿದ್ದ ದೀಪ್ತಿ ಇಂದು ಒಲಿಂಪಿಕ್‌ ಪದಕ ವಿಜೇತೆ

Deepthi Jeevanji

ನವದೆಹಲಿ: ವಿಶ್ವ ಚಾಂಪಿಯನ್ ಪ್ಯಾರಾ ಸ್ಪ್ರಿಂಟರ್ ದೀಪ್ತಿ ಜೀವಾಂಜಿ(Deepthi Jeevanji) ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ(Paralympics) ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಇವರ ಈ ಸಾಧನೆಯನ್ನು ಭಾರತೀಯರು ಕೊಂಡಾಡುತ್ತಿದ್ದಾರೆ. ಆದರೆ, ಇವರು ಬಾಲ್ಯದಲ್ಲಿ ಗ್ರಾಮಸ್ಥರಿಂದ ಎದುರಿಸಿದ ಅವಮಾನ, ನೋವಿನ ಸಂಗತಿಯನ್ನು ಅವರ ತಾಯಿ ಅತ್ಯಂತ ಭಾವುಕರಾಗಿ ತೆರೆದಿಟ್ಟಿದ್ದಾರೆ.

ಮಂಗಳವಾರ ನಡೆದಿದ್ದ ಪ್ಯಾರಾಲಿಂಪಿಕ್ಸ್ ಮಹಿಳೆಯರ ಟಿ20- 400 ಮೀಟರ್ ಸ್ಪರ್ಧೆಯ ಫೈನಲ್‌ನಲ್ಲಿ ದೀಪ್ತಿ ಜೀವಾಂಜಿ 55.82 ಸೆಕೆಂಡ್‌ಗಳಲ್ಲಿ ಗುರು ತಲುಪಿ  ಮೂರನೇ ಸ್ಥಾನಿಯಾಗಿ ಕಂಚು ಗೆದ್ದರು.  ಇದರೊಂದಿಗೆ ಪ್ರೀತಿ ಪಾಲ್ ಬಳಿಕ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದ 2ನೇ ಸಾಧಕಿ ಎನಿಸಿಕೊಂಡರು. ಸೋಮವಾರ ರಾತ್ರಿ ನಡೆದಿದ್ದ ಅರ್ಹತಾ ಸುತ್ತಿನ ಮೊದಲ ಹೀಟ್ಸ್‌ನಲ್ಲಿ 55.85 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ದೀಪ್ತಿ ಅಗ್ರಸ್ಥಾನಿಯಾಗಿ ಪದಕ ಸುತ್ತಿಗೆ ಪ್ರವೇಶ ಪಡೆದಿದ್ದರು. ಹೈದರಾಬಾದ್‌ನ ದಿನಗೂಲಿ ನೌಕರನ ಮಗಳಾಗಿರುವ 20 ವರ್ಷದ ದೀಪ್ತಿ, ವಿಶ್ವ ಅಥ್ಲೆಟಿಕ್ಸ್ ಪ್ಯಾರಾ ಚಾಂಪಿಯನ್‌ಷಿಪ್‌ನ 400 ಮೀಟರ್ ಓಟದಲ್ಲಿ 55.07 ಸೆಕೆಂಡ್‌ಗಳಲ್ಲಿ ಕ್ರಮಿಸಿ ವಿಶ್ವ ದಾಖಲೆಯೊಂದಿಗೆ ಸ್ವರ್ಣ ಪದಕ ಜಯಿಸಿದ್ದ ಗಟ್ಟಿಗಿತ್ತಿ.

https://x.com/RailMinIndia/status/1831180354931085562

ಹುಚ್ಚಿ, ಕೋತಿ ಎಂದಿದ್ದ ಊರವರು…

ದೀಪ್ತಿ ಜೀವಾಂಜಿ ಪದಕ ಗೆದ್ದಾಗ ಅಪಾರ ಸಂತಸ ಮತ್ತು ಹೆಮ್ಮೆಪಟ್ಟಿದ್ದು ಅವರ ತಂದೆ ಮತ್ತು ತಾಯಿ. ಪದಕ ಗೆದ್ದ ಬಳಿಕ ಮಾಧ್ಯಮ ಜತೆ ಮಾತನಾಡಿದ ದೀಪ್ತಿ ತಾಯಿ ಧನಲಕ್ಷ್ಮಿ ತಮ್ಮ ಮಗಳು ಬಾಲ್ಯದಲ್ಲಿ ಎದುರಿಸಿದ್ದ ನಿಂದನೆಗಳನ್ನು ನೆನಪಿಸಿಕೊಂಡರು. ‘ಬೌದ್ಧಿಕ ದುರ್ಬಲತೆಯಿಂದ ಬಳತ್ತಿರುವ ನನ್ನ ಮಗಳು ಜನಿಸಿದ್ದು ಸೂರ್ಯ ಗ್ರಹಣದಂದು. ಹುಟ್ಟುವಾಗ ಅವಳ ತಲೆಯು ತುಂಬಾ ಚಿಕ್ಕದಾಗಿತ್ತು ಮತ್ತು ತುಟಿಗಳು ಮತ್ತು ಮೂಗು ಸ್ವಲ್ಪ ಅಸಾಮಾನ್ಯವಾಗಿತ್ತು. ಅವಳನ್ನು ನೋಡಿದ ಪ್ರತಿಯೊಬ್ಬ ಹಳ್ಳಿಗರು ಮತ್ತು ನಮ್ಮ ಕೆಲವು ಸಂಬಂಧಿಕರು ಆಕೆಯನ್ನು ಹುಚ್ಚಿ ಮತ್ತು ಕೋತಿ ಎಂದು ಕರೆದು ಅವಮಾನಿಸುತ್ತಿದ್ದರು. ಕೆಲವರು ಆಯೆಯಿಂದ ಈ ಊರಿಗೆ ಶಕುನ ಎಂದು ಹೇಳಿದ್ದು ಉಂಟು. ಇನ್ನು ಕೆಲವರು ಆಯೆಯನ್ನು  ಅನಾಥಾಶ್ರಮಕ್ಕೆ ಕಳುಹಿಸಲು ನಮ್ಮಲ್ಲಿ ಒತ್ತಾಯಿಸುತ್ತಿದ್ದರು. ಅಂದು ಅವಮಾನ ಮಾಡಿದ್ದ ಊರಿನವರು ಇಂದು ನನ್ನ ಮಗಳ ಸಾಧನೆಯ ಮುಂದೆ ತಲೆ ತಗ್ಗಿಸುವಂತಾಗಿದೆʼ ಎಂದು ಹೇಳುವ ಮೂಲಕ ಧನಲಕ್ಷ್ಮಿ ಭಾವುಕರಾದರು.

ಇದನ್ನೂ ಓದಿ Mariyappan Thangavelu: ಕಂಚು ಗೆದ್ದು ಐತಿಹಾಸಿಕ ಸಾಧನೆ ಮಾಡಿದ ತಂಗವೇಲು

https://x.com/KirenRijiju/status/1831074015869383024

ಸಮಾಧಾನ ಪಡಿಸಲು ಕೋಳಿ ಸಾರು ಮಾಡುತ್ತಿದ್ದೆ…

‘ನನ್ನ ಪತಿ ದಿನಕ್ಕೆ 100 ಅಥವಾ 150 ರೂ. ಗಳಿಸುತ್ತಿದ್ದರಿಂದ ದೀಪ್ತಿ ಅವರ ತಂಗಿ ಅಮೂಲ್ಯ ಸೇರಿದಂತೆ ನಮ್ಮ ಕುಟುಂಬವನ್ನು ಪೋಷಿಸಲು ನಾನು ದುಡಿಯಬೇಕಾದ ದಿನಗಳು ಇದ್ದವು. ದೀಪ್ತಿ ಯಾವಾಗಲೂ ಶಾಂತವಾಗಿರುತ್ತಿದ್ದಳು. ತುಂಬಾ ಕಡಿಮೆ ಮಾತನಾಡುತ್ತಿದ್ದಳು. ಆದರೆ, ಹಳ್ಳಿಯ ಮಕ್ಕಳು ಅವಳನ್ನು ಚುಡಾಯಿಸಿದರೆ, ಅವಳು ಮನೆಗೆ ಬಂದು ಅಳುತ್ತಿದ್ದಳು. ಈ ವೇಳೆ ನಾನು ಅವಳಿಗೆ ಸಿಹಿ ಅನ್ನವನ್ನು ಅಥವಾ ಕೆಲವು ದಿನಗಳಲ್ಲಿ ಕೋಳಿ ಸಾರು ಮಾಡಿ ಉಣಬಡಿಸಿ ಅವಳನ್ನು ಸಂತೋಷಪಡಿಸುತ್ತಿದ್ದೆʼ ಎಂದು ಧನಲಕ್ಷ್ಮಿ ಅವರು ದೀಪ್ತಿಯ ಬಾಲ್ಯದ ದಿನವನ್ನು ಮೆಲುಕು ಹಾಕಿದರು.