ಗಯಾನ: ವೆಸ್ಟ್ ಇಂಡೀಸ್ ತಂಡದ ಮಾಜಿ ಸ್ಟಾರ್ ಆಲ್‌ರೌಂಡರ್ ಡ್ವೇನ್ ಬ್ರಾವೊ ಅವರು ಕೆರಿಬಿಯನ್ ಕ್ರಿಕೆಟ್ ಲೀಗ್‌ಗೆ ವಿದಾಯ ಘೋಷಿಸಿದ್ದಾರೆ. ಈ ಬಾರಿಯ ಸಿಪಿಎಲ್ ಅವರಿಗೆ ಕೊನೆಯ ಟೂರ್ನಿಯಾಗಲಿದೆ. ಬ್ರಾವೊ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಸದಸ್ಯನಾಗಿದ್ದಾರೆ.
ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಬ್ರಾವೊ ತಮ್ಮ ನಿವೃತ್ತಿಯನ್ನು ಖಚಿತಪಡಿಸಿದರು. ‘ಕೆರಿಬಿನ್ ಕೂಟದಲ್ಲಿನ ಉತ್ತಮ ಪ್ರಯಾಣಕ್ಕೆ ಸದ್ಯದಲ್ಲೇ ಬ್ರೇಕ್ ಬೀಳಲಿದೆ. ಇದು ನನ್ನ ಕೊನೆಯ ಸೀಸನ್. ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದೊಂದಿಗೆ ನಾನು ಸಿಪಿಎಲ್ ಆರಂಭಿಸಿದ್ದೆ, ಇದೀಗ ಇದೇ ತಂಡದೊಂದಿಗೆ ವಿದಾಯ ಹೇಳುತ್ತಿದ್ದೇನೆʼ ಎಂದು ಬ್ರಾವೊ ಬರೆದುಕೊಂಡಿದ್ದಾರೆ.
2021 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಬ್ರಾವೊ ಟಿ20 ಫ್ರಾಂಚೈಸಿ ಲೀಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. 2 ವರ್ಷಗಳ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ವಿದಾಯ ಹೇಳಿದ್ದರು. ಇದೀಗ ತವರಿನ ಪ್ರೀಮಿಯರ್ ಲೀಗ್‌ನಿಂದಲೂ ನಿವೃತ್ತಿಯಾಗಲಿದ್ದಾರೆ. ಕಳೆದ ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ಬ್ರಾವೊ ಅಫಘಾನಿಸ್ತಾನ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಆಫ್ಘಾನ್ ಸೆಮಿ ಫೈನಲ್ ಪ್ರವೇಶಿಸಿತ್ತು.
https://x.com/thecricketgully/status/1829929947109994683
ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಬ್ರಾವೊ ಇದುವರೆಗೆ 104 ಪಂದ್ಯಗಳನ್ನಾಡಿ ಒಟ್ಟು 1,155 ರನ್ ಕಲೆಹಾಕಿದ್ದಾರೆ. ಜತೆಗೆ 128 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2017 ಮತ್ತು 2018 ರಲ್ಲಿ ಬ್ರಾವೊ ನಾಯಕತ್ವದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು ಸಿಪಿಎಲ್ನಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. 2021 ರಲ್ಲಿ ಪೇಟ್ರಿಯಾಟ್ಸ್ ತಂಡವು ಬ್ರಾವೊ ಅವರ ನಾಯಕತ್ವದಲ್ಲೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ವಿಂಡೀಸ್ ತಂಡದ ಪರ ಸಾಧನೆ
ವೆಸ್ಟ್ ಇಂಡೀಸ್ ತಂಡದ ಪರ 40 ಟೆಸ್ಟ್ ಪಂದ್ಯ ಆಡಿರುವ ಬ್ರಾವೊ, 71 ಇನಿಂಗ್ಸ್‌ಗಳಿಂದ 31.43ರ ಸರಾಸರಿಯಲ್ಲಿ 2,200 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಮತ್ತು 13 ಅರ್ಧ ಶತಕಗಳಿವೆ. 39.84ರ ಸರಾಸರಿಯಲ್ಲಿ 86 ವಿಕೆಟ್‌ಳನ್ನು ಕೆಡವಿದ್ದಾರೆ. ಎರಡು ಬಾರಿ ಐದು ವಿಕೆಟ್ ಕಿತ್ತ ಸಾಧನೆ ಒಳಗೊಂಡಿದೆ. 2004ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದ್ದ ಬ್ರಾವೊ 2010ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. 164 ಏಕದಿನ ಪಂದ್ಯಗಳಲ್ಲಿ 25.37ರ ಸರಾಸರಿಯಲ್ಲಿ 2968 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು 10 ಅರ್ಧಶತಕಗಳಿವೆ. ಬೌಲಿಂಗ್ ವಿಭಾಗದಲ್ಲಿ 29.52ರ ಸರಾಸರಿಯಲ್ಲಿ 199 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಕೊಂಡಿದ್ದಾರೆ. 66 ಟಿ20 ಪಂದ್ಯಗಳಲ್ಲಿ 59 ಇನಿಂಗ್ಸ್ ಗಳಿಂದ 116.53 ಸ್ಟ್ರೇಕ್ ರೇಟ್‌ನಲ್ಲಿ 1,142 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳಿವೆ. 8.46ರ ಎಕಾನಮಿಯಲ್ಲಿ 1470 ರನ್ ನೀಡಿ 52 ವಿಕೆಟ್ ಪಡೆದುಕೊಂಡಿದ್ದಾರೆ.