Saturday, 14th December 2024

ENG vs NZ: ಪದಾರ್ಪಣೆ ವರ್ಷದಲ್ಲಿಯೇ 50 ಟೆಸ್ಟ್‌ ವಿಕೆಟ್‌ ಪಡೆದು ದಾಖಲೆ ಬರೆದ ಗಸ್‌ ಅಟ್ಕಿನ್ಸನ್‌!

ENG vs NZ: Gus Atkinson Made Amazing Record Taking 50 Wickets In His Debut Year Becoming Only Second Bowler

ಹ್ಯಾಮಿಲ್ಟನ್: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ವೇಗಿ ಗಸ್‌ ಅಟ್ಕಿನ್ಸನ್‌ (ENG vs NZ) ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವರ್ಷದಲ್ಲಿಯೇ 50 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ವಿಶ್ವದ ಎರಡನೇ ಬೌಲರ್‌ ಎಂಬ ದಾಖಲೆಯನ್ನು ಇಂಗ್ಲೆಂಡ್‌ ವೇಗಿ ಬರೆದಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಮಾರಕ ಬೌಲಿಂಗ್ ಮೂಲಕ ಸದ್ದು ಮಾಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಟ್ಕಿನ್ಸನ್ ಮೊದಲ ದಿನದ ಆಟದಲ್ಲಿ ಇಂಗ್ಲೆಂಡ್ ಪರ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ ಅಟ್ಕಿನ್ಸನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅಟ್ಕಿನ್ಸನ್ 2024ರ ಜುಲೈನಲ್ಲಿ ಇಂಗ್ಲೆಂಡ್‌ ಪರ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅವರು ತಮ್ಮ ಮಾರಕ ದಾಳಿಯಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಭೀತಿ ಹುಟ್ಟಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ಅಟ್ಕಿನ್ಸನ್

147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಚೊಚ್ಚಲ ವರ್ಷದಲ್ಲಿಯೇ 50 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ನೂತನ ದಾಖಲೆಯನ್ನು ಗಸ್‌ ಅಟ್ಕಿನ್ಸನ್‌ ಬರೆದಿದ್ದಾರೆ. ಇವರು ಇಲ್ಲಿಯವರೆಗೂ ಇಂಗ್ಲೆಂಡ್ ಪರ 11 ಟೆಸ್ಟ್ ಪಂದ್ಯಗಳ 20 ಇನಿಂಗ್ಸ್‌ಗಳಲ್ಲಿ 51 ವಿಕೆಟ್ ಪಡೆದಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಟೆರ್ರಿ ಅಲ್ಡರ್ಮನ್ ಬಳಿಕ ಈ ಸಾಧನೆ ಮಾಡಿದ ಎರಡನೇ ಬೌಲರ್‌ ಆಗಿದ್ದಾರೆ. ಆಸೀಸ್‌ ಮಾಜಿ ವೇಗಿ 1981 ರಲ್ಲಿ ತಮ್ಮ ಚೊಚ್ಚಲ ವರ್ಷದಲ್ಲಿ 10 ಪಂದ್ಯಗಳಲ್ಲಿ 54 ವಿಕೆಟ್‌ಗಳನ್ನು ಕಬಳಿಸಿದ್ದರು.

ನ್ಯೂಜಿಲೆಂಡ್‌: 315-9

ಇನ್ನು ಮೂರನೇ ಟೆಸ್ಟ್‌ ಬಗ್ಗೆ ಮಾತನಾಡುವುದಾದರೆ, ಟಾಸ್‌ ಗೆದ್ದ ಇಂಗ್ಲೆಂಡ್ ತಂಡ, ಎದುರಾಳಿ ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ಉತ್ತಮ ಆರಂಭವನ್ನು ಪಡೆದಿತ್ತು. ಆದರೆ, ನಂತರ ಕಮ್‌ಬ್ಯಾಕ್‌ ಮಾಡಿದ ಇಂಗ್ಲೆಂಡ್ ಬೌಲರ್‌ಗಳು ಮೊದಲನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್‌ಗಳನ್ನು ಕಬಳಿಸಿ, ನ್ಯೂಜಿಲೆಂಡ್‌ಗೆ ತಿರುಗೇಟು ನೀಡಿದರು.

ನ್ಯೂಜಿಲೆಂಡ್ ಪರ ಇನಿಂಗ್ಸ್ ಆರಂಭಿಸಿದ ನಾಯಕ ಟಾಮ್ ಲೇಥಮ್‌ 63 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದರು.ಇದಲ್ಲದೇ ವಿಲ್ ಯಂಗ್ (42) ಮತ್ತು ಕೇನ್ ವಿಲಿಯಮ್ಸನ್ (44) ಕೂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಆದರೆ, ಇವರಿಬ್ಬರ ಔಟಾದ ನಂತರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಆದರೆ ಮಿಚೆಲ್ ಸ್ಯಾಂಟ್ನರ್ ಮೊದಲನೇ ದಿನ ಔಟಾಗದೆ ಜವಾಬ್ದಾರಿಯುತವಾಗಿ ಬ್ಯಾಟ್‌ ಮಾಡಿದರು. ಅವರು ಮೊದಲನೇ ದಿನದಾಟದ ಅಂತ್ಯಕ್ಕೆ ಔಟಾಗದೆ 50 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರ ಜತೆ ಮತ್ತೊಂದು ತುದಿಯಲ್ಲಿ ವಿಲಿಯಮ್‌ ರೌರ್ಕಿ ಆಡಲಿದ್ದಾರೆ.

ಅಂತಿಮವಾಗಿ ನ್ಯೂಜಿಲೆಂಡ್‌ ಆರಂಭಿಕ ದಿನದಟದ ಅಂತ್ಯಕ್ಕೆ 82 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 315 ರನ್‌ಗಳನ್ನು ಕಲೆ ಹಾಕಿದೆ. ಇಂಗ್ಲೆಂಡ್‌ ಪರ ಗಸ್‌ ಅಟ್ಕಿನ್ಸನ್‌ ಜತೆಗೆ ಮ್ಯಾಥ್ಯೂ ಪಾಟ್‌ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಬ್ರೈಡನ್‌ ಕಾರ್ಸ್‌ ಎರಡು ವಿಕೆಟ್‌ ಪಡದಿದ್ದಾರೆ.

ಈ ಸುದ್ದಿಯನ್ನು ಓದಿ:NZ vs ENG: ಚೆಂಡು ತಡೆಯಲು ಹೋಗಿ ವಿಕೆಟ್‌ ಕಳೆದುಕೊಂಡ ವಿಲಿಯಮ್ಸನ್‌; ಇಲ್ಲಿದೆ ವಿಡಿಯೊ