Tuesday, 17th December 2024

ENG vs NZ: ಇತಿಹಾಸ ಬರೆದ ನ್ಯೂಜಿಲೆಂಡ್‌, ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಇಂಗ್ಲೆಂಡ್‌!

ENG vs NZ: New Zealand Create History; England Become First Team to lose two Tests in a year by more than 400 runs

ಹ್ಯಾಮಿಲ್ಟನ್‌: ಇಲ್ಲಿನ ಸೆಡಾನ್‌ ಪಾರ್ಕ್‌ನಲ್ಲಿ ಮಂಗಳವಾರ ಅಂತ್ಯವಾದ ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ (ENG vs NZ) ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ ತಂಡ 423 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಇದು ಕಿವೀಸ್‌ಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ದೊಡ್ಡ ಜಯ ಇದಾಗಿದೆ. ಆದರೆ, 2008ರ ಬಳಿಕ ಇದೇ ಮೊದಲು ನ್ಯೂಜಿಲೆಂಡ್‌ ಎದುರು 2-1 ಅಂತರದಲ್ಲಿ ಟೆಸ್ಟ್‌ ಸರಣಿ ಗೆದ್ದರೂ ಇಂಗ್ಲೆಂಡ್‌ ತಂಡ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದೆ.

ಭಾರತದ ಎದುರು ಅವರದೇ ನೆಲದಲ್ಲಿ ಐತಿಹಾಸಿಕ ಟೆಸ್ಟ್‌ ಸರಣಿ ಗೆದ್ದಿದ್ದ ಟಾಮ್‌ ಲೇಥಮ್‌ ನಾಯಕತ್ವದ ನ್ಯೂಜಿಲೆಂಡ್‌ ತಂಡ, ಇಂಗ್ಲೆಂಡ್‌ ವಿರುದ್ದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಸೋಲು ಅನುಭವಿಸಿದ್ದರೆ, ಎರಡನೇ ಟೆಸ್ಟ್‌ ಪಂದ್ಯದಲ್ಲಿ 323 ರನ್‌ಗಳಿಂದ ಭಾರಿ ಸೋಲು ಅನುಭವಿಸಿತ್ತು. ಆ ಮೂಲಕ ಮೂರನೇ ಪಂದ್ಯವನ್ನು ದೊಡ್ಡ ಅಂತರದಲ್ಲಿ ಗೆಲ್ಲುವ ಮೂಲಕ ಕಿವೀಸ್‌ ವೈಟ್‌ವಾಷ್‌ ಆಘಾತದಿಂದ ತಪ್ಪಿಸಿಕೊಂಡಿತು.

ಇತಿಹಾಸ ಬರೆದ ಕಿವೀಸ್‌

ಇಂಗ್ಲೆಂಡ್‌ ವಿರುದ್ದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ 423 ರನ್‌ಗಳ ದೊಡ್ಡ ಗೆಲುವು ಇದಾಗಿದೆ. ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ದ ಕ್ರೈಸ್ಟ್‌ ಚರ್ಚ್‌ನಲ್ಲಿಯೂ ಕೂಡ ಕಿವೀಸ್‌ ಇದೇ ಮೊತ್ತದ ಅಂತರದಲ್ಲಿ ದೊಡ್ಡ ಗೆಲುವು ಜಯ ದಾಖಲಿಸಿತ್ತು. ಒಟ್ಟಾರೆ ಟೆಸ್ಟ್‌ ಕ್ರಿಕೆಟ್‌ ಇತಿಹಾಸಲ್ಲಿ 10ನೇ ಅತ್ಯಂತ ದೊಡ್ಡ ಗೆಲುವು (ರನ್‌ಗಳಿಂದ) ಇದಾಗಿದೆ.

ಅನಗತ್ಯ ದಾಖಲೆ ಬರೆದ ಇಂಗ್ಲೆಂಡ್‌

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಇಂಗ್ಲೆಂಡ್‌ಗೆ ಇದು ಅತ್ಯಂತ ನಾಲ್ಕನೇ ಕೆಟ್ಟ ಸೋಲು ಇದಾಗಿದೆ ಹಾಗೂ 2024ರಲ್ಲಿ ಇಂಗ್ಲೆಂಡ್‌ ತಂಡ ಎರಡನೇ ಬಾರಿ 400ಕ್ಕೂ ಅತಿ ಹೆಚ್ಚು ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿದೆ. ಇದಕ್ಕೂ ಮುನ್ನ ಭಾರತದ ಎದುರು ರಾಜ್‌ಕೋಟ್‌ ಟೆಸ್ಟ್‌ನಲ್ಲಿ ಆಂಗ್ಲರು 434 ರನ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಏಕೈಕ ವರ್ಷದಲ್ಲಿ 400ಕ್ಕೂ ಅಧಿಕ ಮೊತ್ತದ ಅಂತರದಲ್ಲಿ ಎರಡು ಬಾರಿ ಸೋಲು ಅನುಭವಿಸಿದ ಮೊದಲ ತಂಡ ಎಂಬ ಅನಗತ್ಯ ದಾಖಲೆಯನ್ನು ಇಂಗ್ಲೆಂಡ್‌ ಹೆಗಲೇರಿಸಿಕೊಂಡಿದೆ.

ಆರು ಬಾರಿ 400ಕ್ಕೂ ಹೆಚ್ಚು ರನ್‌ ಅಂತರದಲ್ಲಿ ಸೋತಿರುವ ಆಂಗ್ಲರು

ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟು 15 ಬಾರಿ ತಂಡಗಳು 400ಕ್ಕೂ ಅಧಿಕ ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿವೆ. ಆದರೆ, 2024ರಲ್ಲಿ ಎರಡು ಬಾರಿ ಈ ಅಂತರದಲ್ಲಿ ಸೋಲು ಅನುಭವಿಸಿದೆ. ಅಲ್ಲದೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 400ಕ್ಕೂ ಅಧಿಕ ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿದ ಮೊದಲ ತಂಡ ಎಂಬ ಅಪಖ್ಯಾತಿಗ ಆಂಗ್ಲರು ಒಳಗಾಗಿದ್ದಾರೆ. ಇಂಗ್ಲೆಂಡ್‌ ತಂಡ ಆರು ಬಾರಿ ಈ ಮೊತ್ತದ ಅಂತರದಲ್ಲಿ ಸೋತಿದೆ. 400ಕ್ಕೂ ಹೆಚ್ಚು ರನ್‌ಗಳ ಅಂತರದಲ್ಲಿ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿದೆ. ಆಸೀಸ್‌ ಒಟ್ಟು ಆರು ಟೆಸ್ಟ್‌ ಪಂದ್ಯಗಳನ್ನು 400ಕ್ಕೂ ಹೆಚ್ಚಿನ ರನ್‌ಗಳ ಅಂತರದಲ್ಲಿ ಗೆದ್ದಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳ ಅಂತರದಲ್ಲಿ ಗೆದ್ದ ತಂಡ ಎಂಬ ದಾಖಲೆ ಇಂಗ್ಲೆಂಡ್‌ ಹೆಸರಿನಲ್ಲಿದೆ. 1928ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ದ ಇಂಗ್ಲೆಂಡ್‌ 675 ರನ್‌ಗಳ ಅಂತರದಲ್ಲಿ ಗೆದ್ದಿತ್ತು.

ಈ ಸುದ್ದಿಯನ್ನು ಓದಿ:ನ್ಯೂಜಿಲೆಂಡ್‌’ಗೆ ಇನ್ನಿಂಗ್ಸ್, 134 ರನ್‌ ಗೆಲುವು