Saturday, 14th December 2024

ಅಕ್ಷರ್‌ ಮೋಡಿ: ಇಂಗ್ಲೆಂಡ್ 112 ರನ್‌ಗೆ ಆಲೌಟ್‌

ಅಹಮದಾಬಾದ್‌: ಭಾರತ ತಂಡದ ವಿರುದ್ಧ ಬುಧವಾರ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 112 ರನ್ನುಗಳಿಗೆ ಆಲೌಟಾಗಿ, ಬ್ಯಾಟಿಂಗ್‌ ಆಯ್ಕೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಪ್ರವಾಸಿ ತಂಡ, ಟೀಂ ಇಂಡಿಯಾದ ಸ್ಪಿನ್‌ ದಾಳಿಗೆ ತಲೆ ಬಾಗಿತು. ತಮ್ಮ ಎರಡನೇ ಓವರಿನಲ್ಲಿ ಪ್ರವಾಸಿಗರ ಮೊದಲ ವಿಕೆಟ್‌ ಕಿತ್ತ ವೇಗಿ ಇಶಾಂತ್‌ ಶರ್ಮಾಗೆ ಬಳಿಕ ಸ್ಪಿನ್‌ ದಾಳಿಯ ಭರಪೂರಾ ನೆರವು ಸಿಕ್ಕಿತು. 100ನೇ ಟೆಸ್ಟ್ ಪಂದ್ಯವಾಡುತ್ತಿರುವ ಹಿರಿಯ ವೇಗಿ ಇಶಾಂತ್ ಶರ್ಮಾ ಅವರು ಆರಂಭಿಕ ಡಾಮ್ನಿಕ್ ಸಿಬ್ಲಿ (0) ವಿಕೆಟ್‌ ಕಿತ್ತು ಸಂಭ್ರಮಿಸಿದರು.

ಆಲ್ರೌಂಡರ್‌ ಅಕ್ಷರ್‌ ಪಟೇಲ್‌ ಹಾಗೂ ರವಿಚಂದ್ರನ್‌ ಅಶ್ವಿನ್‌ ಉಳಿದ ಒಂಬತ್ತು ವಿಕೆಟ್‌ಗಳನ್ನು ಕಿತ್ತು, ಎದ್ದೇಳಲಾಗದ ಹೊಡೆತ ನೀಡಿದರು. ಎಡಗೈ ಸ್ಪಿನ್ನರ್‌ ಅಕ್ಷರ್ ಪಟೇಲ್‌ ಎಸೆತದಲ್ಲಿ ಜಾನಿ ಬೆಸ್ಟೊ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ವೇಳೆ ಇಂಗ್ಲೆಂಡ್ ಮೊತ್ತ 27 ರನ್‌ ಆಗಿತ್ತು. ನಾಯಕ ಜೋ ರೂಟ್‌ (17) ಅವರನ್ನು ರವಿಚಂದ್ರನ್ ಅಶ್ವಿನ್ ಪೆವಿಲಿಯನ್‌ಗೆ ಕಳುಹಿಸಿದರು. ಅರ್ಧಶತಕ ಪೂರೈಸಿ ಮುನ್ನುಗ್ಗುತ್ತಿದ್ದ ಜ್ಯಾಕ್ ಕ್ರಾವ್ಲಿ (53) ಅವರನ್ನು ಅಕ್ಷರ್ ಸ್ಪಿನ್ ಬಲೆಗೆ ಬೀಳಿಸಿದರು.

ಬಳಿಕ ಹಂತ ಹಂತವಾಗಿ, ಅಕ್ಷರ್‌ ತಮ್ಮ ಬೌಲಿಂಗ್‌ ದಾಳಿ ಮಂದುವರಿಸಿ, ಪ್ರವಾಸಿಗರು ದೀರ್ಘ ಇನ್ನಿಂಗ್ಸ್‌ ಬೆಳೆಸಲು ಆಸ್ಪದ ನೀಡದೆ, ಅಲ್ಪ ಮೊತ್ತಕ್ಕೆ ಆಟ ಮುಗಿಸಿದರು. ಅಕ್ಷರ್‌ ಪಟೇಲ್‌ ಆರು ವಿಕೆಟ್‌ ಕಿತ್ತು ಮಿಂಚಿದರೆ, ಅಶ್ವಿನ್‌ ಮೂರು ಹಾಗೂ ವೇಗಿ ಇಶಾಂತ್‌ ಒಂದು ವಿಕೆಟ್‌ ಕಿತ್ತರು.