Wednesday, 11th December 2024

ಪಿಚ್‌ ಮರ್ಮ ಅರಿಯದ ಇಂಗ್ಲೆಂಡ್‌, ಇನ್ನಿಂಗ್ಸ್ ಸೋಲು ತಪ್ಪಿಸಲು ಹರಸಾಹಸ

ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಗೆಲುವು ಸಾಧಿಸಲು ಟೀಮ್ ಇಂಡಿಯಾ ಎದುರು ನೋಡುತ್ತಿದೆ. ಇತ್ತೀಚಿನ ವರದಿ ಪ್ರಕಾರ, ಇಂಗ್ಲೆಂಡ್‌ ಎಂಟು ವಿಕೆಟ್‌ ನಷ್ಟಕ್ಕೆ 112 ರನ್‌ ಗಳಿಸಿದ್ದು, ಇನ್ನಿಂಗ್ಸ್ ಸೋಲು ತಪ್ಪಿಸಲು 48 ರನ್‌ ಗಳಿಸಬೇಕಾದ ಒತ್ತಡದಲ್ಲಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್‌ಗಳು ಸಂಪೂರ್ಣ ಮೇಲುಗೈ ಸಾಧಿಸಿದರು. ಇಂಗ್ಲೆಂಡ್ ನಾಯಕ ಜೋ ರೂಟ್ (30) ಹೊರತುಪಡಿಸಿದರೆ ಇತರೆ ಯಾವ ಬ್ಯಾಟ್ಸ್‌ಮನ್‌ಗಳು ಹೋರಾಟದ ಮನೋಭಾವ ತೋರಲೇ ಇಲ್ಲ.

ದ್ವಿತೀಯ ಇನ್ನಿಂಗ್ಸ್‌ನಲ್ಲೂ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದ ಭಾರತೀಯ ಬೌಲರ್‌ಗಳು ಪ್ರಭಾವಿ ದಾಳಿ ಸಂಘಟಿಸಿದರು. ಪರಿಣಾಮ ಎರಡನೇ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ಮರೆತಂತೆ ಆಡಿದ ಇಂಗ್ಲೆಂಡ್ ತೀರಾ ರಕ್ಷಣಾತ್ಮಕ ಆಡಿ, ತನ್ನನ್ನೇ ಹಳಿದುಕೊಂಡಿತು.

ಜ್ಯಾಕ್ ಕ್ರಾಲಿ (5), ಡಾಮಿನಿಕ್ ಸಿಬ್ಲಿ (3), ಜಾನಿ ಬೈರ್‌ಸ್ಟೋ (0), ಬೆನ್ ಸ್ಟೋಕ್ಸ್ (2) ಹಾಗೂ ಒಲ್ಲಿ ಪಾಪ್ (15) ನಿರಾಸೆ ಮೂಡಿಸಿದರು. ಭಾರತದ ಪರ ಸ್ಪಿನ್ ದ್ವಯರಾದ ರವಿಚಂದ್ರನ್ ಅಶ್ವಿನ್ ಮೂರು ಹಾಗೂ ಅಕ್ಷರ್ ಪಟೇಲ್ ಐದು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು.

ಈ ಮೊದಲು ರಿಷಭ್ ಪಂತ್ (101), ವಾಷಿಂಗ್ಟನ್ ಸುಂದರ್ (ಅಜೇಯ 96) ಹಾಗೂ ರೋಹಿತ್ ಶರ್ಮಾ (49) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 365 ರನ್ ಪೇರಿಸಿತ್ತು. ಈ ಮೂಲಕ 160 ರನ್‌ಗಳ ಬೃಹತ್ ಮುನ್ನಡೆ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.

ಮೂರನೇ ದಿನದಾಟದಲ್ಲಿ ಆಕರ್ಷಕ ಬ್ಯಾಟಿಂಗ್ ಮುಂದುವರಿಸಿದ ವಾಷಿಂಗ್ಟನ್ ಸುಂದರ್ 96 ರನ್ ಗಳಿಸಿ ಅಜೇಯರಾಗುಳಿ ದರು. ಆದರೆ ವಿಕೆಟ್‌ನ ಮತ್ತೊಂದು ತುದಿಯಿಂದ ಸೂಕ್ತ ಬೆಂಬಲ ದೊರಕದೆ ಚೊಚ್ಚಲ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು.

ನಂತರದ ಓವರ್‌ನಲ್ಲೇ ಇಶಾಂತ್ ಶರ್ಮಾ (0) ಹಾಗೂ ಮೊಹಮ್ಮದ್ ಸಿರಾಜ್ (0) ಹೊರದಬ್ಬಿದ ಬೆನ್ ಸ್ಟೋಕ್ಸ್ ಭಾರತದ ಇನ್ನಿಂಗ್ಸ್‌ಗೆ ಇತಿ ಶ್ರೀ ಹಾಡಿದರು. ಇದರೊಂದಿಗೆ ಭಾರತ 114.4 ಓವರ್‌ಗಳಲ್ಲಿ 365 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದು ಕೊಂಡಿತು.