Saturday, 30th November 2024

ಚಿನ್ನಸ್ವಾಮಿ ಸ್ಟೇಡಿಯಂನ ಸ್ಟ್ಯಾಂಡ್‌ಗಳಿಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಆಗ್ರಹ

ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂಗೆ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ 10 ಕ್ರಿಕೆಟ್​ ದಿಗ್ಗಜರ ಹೆಸರನ್ನು ಕ್ರೀಡಾಂಗಣದ ಪ್ರೇಕ್ಷಕರ ಸ್ಟ್ಯಾಂಡ್​​ಗಳಿಗೆ ಇಟ್ಟು ಗೌರವಿಸಲು ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ (ಕೆಎಸ್​ಸಿಎ) ಇತ್ತೀಚೆಗೆ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ರಾಜ್ಯ ಮತ್ತು ದೇಶದ ಕ್ರಿಕೆಟ್‌ಗೆ ಮಹತ್ವದ ಕೊಡುಗೆ ನೀಡಿರುವ ಮಹಿಳಾ ಕ್ರಿಕೆಟ್ ಆಟಗಾರ್ತಿ ಶಾಂತಾ ರಂಗಸ್ವಾಮಿ(Shanta Rangawswamy) ಅವರ ಹೆಸರನ್ನೂ ಸ್ಟ್ಯಾಂಡ್‌ಗೆ ಇಡಲು ಪರಿಗಣಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಐದು ದಶಕಗಳ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಭಾರತ ತಂಡದಲ್ಲಿ ಕರ್ನಾಟಕದ ಎರ್ರಪಳ್ಳಿ ಪ್ರಸನ್ನ, ಬಿ.ಎಸ್. ಚಂದ್ರಶೇಖರ್, ಜಿ.ಆರ್. ವಿಶ್ವನಾಥ್ ಮತ್ತು ಬ್ರಿಜೇಶ್ ಪಟೇಲ್ ಆವರೂ ಇದ್ದರು. ಅವರೆಲ್ಲರೂ ಸೇರಿದಂತೆ ಸುಮಾರು ಹತ್ತು ಮಂದಿ ದಿಗ್ಗಜರ ಹೆಸರುಗಳನ್ನು ವಿವಿಧ ಸ್ಟ್ರ್ಯಾಂಡ್‌ಗಳಿಗೆ ನಾಮಕರಣ ಮಾಡಲು ಕೆಎಸ್‌ಸಿಎ ಚಿಂತನೆ ನಡೆಸಿದೆ. ಈ ಗೌರವಕ್ಕೆ ಇದೀಗ ಒಬ್ಬರೂ ಮಹಿಳಾ ಕ್ರಿಕೆಟಿಗರ ಹೆಸರನ್ನು ಇಡಬೇಕು ಎನ್ನುವುದು ಮಹಿಳಾ ಕ್ರಿಕೆಟಿಗರ ಒತ್ತಾಯ.

ಶಾಂತಾ ಅವರು 1976 ರಿಂದ 1991ರವರೆಗೆ ಭಾರತ ತಂಡದಲ್ಲಿ ಆಡಿದ್ದರು. 16 ಟೆಸ್ಟ್‌ಗಳಲ್ಲಿ 750 ರನ್ ಗಳಿಸಿದ್ದರು. ಅದರಲ್ಲಿ ಒಂದು ಶತಕ ಮತ್ತು 6 ಅರ್ಧಶತಕಗಳು ಇವೆ. 19 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿ 267 ರನ್‌ ಗಳಿಸಿದ್ದಾರೆ. ಅದರಲ್ಲಿ ಒಂದು ಅರ್ಧಶತಕ ಇದೆ. ಟೆಸ್ಟ್ ನಲ್ಲಿ 21 ಮತ್ತು ಏಕದಿನ ಮಾದರಿಯಲ್ಲಿ 12 ವಿಕೆಟ್‌ಗಳನ್ನೂ ಗಳಿಸಿದ್ದರು.

ಕಳೆದ ವರ್ಷ ಇತಿಹಾಸಕಾರ ಮತ್ತು ಲೇಖಕ ರಾಮಚಂದ್ರ ಗುಹಾ ಅವರು ಚಿನ್ನಸ್ವಾಮಿ ಕ್ರೀಡಾಂಗಣದ ದ್ವಾರಗಳು ಅಥವಾ ಸ್ಟ್ಯಾಂಡ್‌ಗಳಿಗೆ ರಾಜ್ಯದ ಖ್ಯಾತನಾಮ ಕ್ರಿಕೆಟಿಗರ ಹೆಸರುಗಳನ್ನು ಇಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿದ ಸಿದ್ಧರಾಮಯ್ಯ, ಕೆಎಸ್‌ಸಿಎ ಅಧ್ಯಕ್ಷರಿಗೆ ಪತ್ರ ಬರೆದು, ರಾಜ್ಯಕ್ಕೆ ಕೀರ್ತಿ ತಂದ ಮಹನೀಯ ಕ್ರಿಕೆಟಿಗರ ಹೆಸರುಗಳನ್ನು ಸ್ಟ್ಯಾಂಡ್‌ಗಳಿಗೆ ಇಡಬೇಕು ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ದಿಗ್ಗಜ ಕ್ರಿಕೆಟಿಗರ ಹೆಸರಿಡಲು ಚಿಂತನೆ

ಶ್ರೇಷ್ಠ ಬ್ಯಾಟರ್ ವಿಶ್ವನಾಥ್, ಸ್ಪಿನ್ ಅವಳಿಗಳಾದ ಪ್ರಸನ್ನ ಮತ್ತು ಚಂದ್ರಶೇಖರ್ ರಾಜ್ಯ ಮತ್ತು ದೇಶದ ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಅಮೋಘವಾದದ್ದು. ಅವರ ಹೆಸರುಗಳನ್ನು ಸ್ಟ್ಯಾಂಡ್‌ಗಳಿಗೆ ಇಡಲು ಕ್ರಮ ಕೈಗೊಳ್ಳಬೇಕು’ ಎಂದು ಗುಹಾ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಿವರಿಸಿದ್ದರು.