Saturday, 14th December 2024

ಗಬ್ಬಾ ಅಂಗಳದಲ್ಲಿ ಇತಿಹಾಸ ಸೃಷ್ಟಿಸಿ ಒಂದು ವರ್ಷ

ಗಬ್ಬಾ: 32 ವರ್ಷಗಳಿಂದ ಬ್ರಿಸ್ಬೇನ್‌ನ ಗಬ್ಬಾ ಅಂಗಳದಲ್ಲಿ ಸೋಲನ್ನೇ ಕಾಣದೆ ಮೆರೆಯುತ್ತಿದ್ದ ಬಲಿಷ್ಠ ಕಾಂಗರೂ ಪಡೆಗಳ ಸೊಕ್ಕನ್ನು ಭಾರತದ ಯುವಪಡೆ ಮುರಿದು ಹಾಕಿತ್ತು.

ಅಡಿಲೇಡ್ ಓವಲ್‌ನಲ್ಲಿ ನಡೆದ 4 ಪಂದ್ಯಗಳ ಸರಣಿಯ ಮೊದಲನೇ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರಿ ಮುಖಭಂಗ ಅನುಭವಿಸಿತ್ತು.

ಕಾಂಗರೂ ಪಡೆ ಮೊದಲನೇ ಟೆಸ್ಟ್ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಮೊದಲನೇ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಸರಣಿಯಿಂದ ಹೊರಗುಳಿದರೆ, ಎರಡನೇ ಟೆಸ್ಟ್ ಪಂದ್ಯ ಕ್ಕಾಗಿ ಅಜಿಂಕ್ಯ ರಹಾನೆ ನಾಯಕತ್ವ ವಹಿಸಿಕೊಂಡರು. ನಂತರ ನಡೆದದ್ದು ಈಗ ಇತಿಹಾಸ.

ಮೊದಲನೇ ಪಂದ್ಯ ಸಂಭ್ರಮದಲ್ಲಿ ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ರಹಾನೆ ನೇತೃತ್ವದ ಯುವ ಪಡೆ ಮೊದಲ ಆಘಾತ ನೀಡಿತ್ತು.

ಎಂಸಿಜಿ ಅಂಗಳದಲ್ಲಿ ನಡೆದ ಪಂದ್ಯಲ್ಲಿ ಭಾರತದ ವೇಗದ ಬೌಲಿಂಗ್ ದಾಳಿಗೆ ಸಿಕ್ಕ ಕಾಂಗರೂಗಳು ತತ್ತರಿಸಿದರು. ಕೇವಲ 195 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಾ ಆಘಾತ ಅನುಭವಿಸಿತು. ಬುಮ್ರಾ 4 ವಿಕೆಟ್ ಪಡೆದರೆ, ಅಶ್ವಿನ್ 3 ವಿಕೆಟ್ ಪಡೆದರು, ಮೊಹಮ್ಮದ್ ಸಿರಾಜ್ 2 ವಿಕೆಟ್, ಜಡೇಜಾ ಒಂದು ವಿಕೆಟ್ ಪಡೆದು ಮಿಂಚಿದರು.ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ರಹಾನೆ ಅದ್ಭುತ ಶತಕ, ಜಡೇಜಾರ ಅರ್ಧಶತಕದ ನೆರವಿನಿಂದ 326 ರನ್‌ ಗಳಿಸಿ ಆಲೌಟ್ ಆಯಿತು. 131 ರನ್‌ಗಳ ಮುನ್ನಡೆ ಕಾಯ್ದುಕೊಂಡಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಕಾಂಗರೂಗಳ ಆಟ ನಡೆಯಲಿಲ್ಲ. ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ 200 ರನ್‌ಗಳಿಗೆ ಆಲೌಟ್ ಆಗಿ 69 ರನ್‌ಗಳ ಅತ್ಯಲ್ಪ ಮುನ್ನಡೆ ಪಡೆಯಿತು. ಸಿರಾಜ್ 3 ವಿಕೆಟ್ ಪಡೆದರೆ, ಬುಮ್ರಾ, ಅಶ್ವಿನ್ , ಜಡೇಜಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 8 ವಿಕೆಟ್ ಭರ್ಜರಿ ಜಯ ಸಾಧಿಸಿ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿತು.

ಸರಣಿಯ ಕೊನೆಯ ಪಂದ್ಯ ಬ್ರಿಸ್ಬೇನ್‌ ಗಬ್ಬಾ ಅಂಗಳದಲ್ಲಿ ಆಯೋಜನೆಯಾಗಿತ್ತು. ಸತತ 32 ವರ್ಷಗಳಿಂದ ಗಬ್ಬಾ ಅಂಗಳ ದಲ್ಲಿ ಸೋಲನ್ನೇ ಕಾಣದ ಆಸ್ಟ್ರೇಲಿಯಾ ಪಡೆ ಭಾರತದ ವಿರುದ್ಧ ಸರಣಿ ಗೆಲ್ಲುವ ಕನಸು ಕಂಡಿದ್ದರು.

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 369 ರನ್‌ಗಳಿಗೆ ಆಲೌಟ್ ಆಯಿತು. ನಟರಾಜನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ ತಲಾ ಮೂರು ವಿಕೆಟ್ ಪಡೆದರು. ಸಿರಾಜ್ ಒಂದು ವಿಕೆಟ್ ಉರುಳಿಸಿದ್ದರು.

ವಾಷಿಂಗ್ಟನ್ ಸುಂದರ್ 62, ಶಾರ್ದುಲ್ ಠಾಕೂರ್ 67 ರನ್ ಗಳಿಸುವ ಮೂಲಕ ತಕ್ಕ ಎದುರೇಟು ಕೊಟ್ಟರು. ಮೊದಲ ಇನ್ನಿಂಗ್ಸ್‌ನಲ್ಲಿ 336 ರನ್‌ಗಳಿಗೆ ಆಲೌಟ್ ಆದ ಭಾರತ 33 ರನ್‌ಗಳ ಹಿನ್ನಡೆ ಅನುಭವಿಸಿತು.

ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮಾರಕವಾದರು. ಸಿರಾಜ್ 5 ವಿಕೆಟ್‌ಗಳನ್ನು ಪಡೆದು ಮಿಂಚಿದರೆ, ಶಾರ್ದುಲ್ 4 ವಿಕೆಟ್ ಕಿತ್ತರು. ಅಂತಿಮವಾಗಿ ಆಸ್ಟ್ರೇಲಿಯಾ 294 ರನ್‌ಗಳಿಗೆ ಆಲೌಟ್ ಆಗುವ ಮೂಲಕ 327 ರನ್‌ಗಳ ಮುನ್ನಡೆ ಪಡೆದುಕೊಂಡಿತು.

328 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ ಕಾಂಗರೂಗಳ ಮಾರಕ ಬೌಲಿಂಗ್‌ ಅನ್ನು ಮೆಟ್ಟಿ ನಿಂತಿತು. ಶುಭಮನ್ ಗಿಲ್ 91 ರನ್ ಗಳಿಸಿದರೆ, ಪೂಜಾರ 211 ಎಸೆತಗಳಲ್ಲಿ 56 ರನ್‌ ಗಳಿಸಿ ಬಂಡೆಯಂತೆ ನಿಂತರು. ಆಸ್ಟ್ರೇಲಿಯಾ ಬೌಲರ್ ಗಳ ಬೆಂಡೆತ್ತಿದ ರಿಷಬ್ ಪಂತ್ ಅಜೇಯ 89 ರನ್‌ ಗಳಿಸುವ ಮೂಲಕ ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.

Read E-Paper click here