Friday, 13th December 2024

Gautam Gambhir:ಕೋಚ್‌ ಗಂಭೀರ್‌ ಪ್ರಕಟಿಸಿದ ಸಾರ್ವಕಾಲಿಕ ಭಾರತ ತಂಡದಲ್ಲಿ ರೋಹಿತ್‌ಗಿಲ್ಲ ಅವಕಾಶ

Gautam Gambhir

ಮುಂಬಯಿ: ಇತ್ತಿಚೆಗಷ್ಟೇ ಭಾರತ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿರುವ ಗೌತಮ್‌ ಗಂಭೀರ್‌(Gautam Gambhir) ಅವರು ಸಾರ್ವಕಾಲಿಕ ಭಾರತ ಪ್ಲೇಯಿಂಗ್‌ ಇಲೆವೆನ್‌ ತಂಡವೊಂದನ್ನು ಪ್ರಕಟಿಸಿದ್ದಾರೆ. ಅಚ್ಚರಿ ಎಂದರೆ ಈ ತಂಡದಲ್ಲಿ ಮಹೇಂದ್ರ ಸಿಂಗ್‌ ಧೋನಿ(MS Dhoni) ಮತ್ತು ವಿರಾಟ್‌ ಕೊಹ್ಲಿಗೆ(Virat Kohli) ಸ್ಥಾನ ನೀಡಿ ಪ್ರಸ್ತುತ ಭಾರತ ತಂಡದ ನಾಯಕನಾಗಿರುವ ರೋಹಿತ್‌ ಶರ್ಮ(Rohit Sharma) ಮತ್ತು ಸ್ಟಾರ್‌ ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಅವರನ್ನು ಕೈಬಿಟ್ಟಿರುವುದು.

ಸ್ಪೋರ್ಟ್ಸ್‌ ಕೀಡಾ ಜತೆ ನಡೆದ ಸಂದರ್ಶನದಲ್ಲಿ ಮಾತನಾಡುವ ವೇಳೆ ಗಂಭೀರ್‌ ಈ ತಂಡವನ್ನು ಪ್ರಕಟಿಸಿದರು. ಆರಂಭಿಕ ಆಟಗಾರನಾಗಿ ತಮ್ಮ ಹೆಸರಿನ ಜತೆಗೆ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ವೀರೆಂದ್ರ ಸೆಹವಾಗ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕದ ಬ್ಯಾಟರ್‌ ಆಗಿ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ರನ್ನು ಆಯ್ಕೆ ಮಾಡಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ದಿಗ್ಗಜ ಸಚಿನ್‌ ತೆಂಡೂಲ್ಕರ್‌, ಬಳಿಕ ವಿರಾಟ್‌ ಕೊಹ್ಲಿ, ಯುವರಾಜ್‌ ಸಿಂಗ್‌ ಮತ್ತು ಮಹೇಂದ್ರ ಸಿಂಗ್‌ ಧೋನಿ ಅವರನ್ನು ಆಯ್ಕೆ ಮಾಡಿದ್ದಾರೆ. ಸ್ಪಿನ್‌ ಬೌಲಿಂಗ್‌ ವಿಭಾಗದಲ್ಲಿ ಅನಿಲ್‌ ಕುಂಬ್ಳೆ ಮತ್ತು ರವಿಚಂದ್ರನ್‌ ಅಶ್ವಿನ್‌ ಆಯ್ಕೆಯಾಗಿದ್ದಾರೆ. ವೇಗಿಗಳಾಗಿ ಇರ್ಫಾನ್‌ ಪಠಾಣ್‌ ಮತ್ತು ಜಹೀರ್‌ ಖಾನ್‌ಗೆ ಅವಕಾಶ ನೀಡಲಾಗಿದೆ.

https://x.com/mahavee32227316/status/1830284052387299571

ಈ ತಂಡದಲ್ಲಿ ಹಾಲಿ ಕ್ರಿಕೆಟ್‌ ಆಡುತ್ತಿರುವ ಆಟಗಾರರಲ್ಲಿ ಕೇವಲ ಇಬ್ಬರು ಮಾತ್ರ ಕಾಣಿಸಿಕೊಂಡಿದ್ದಾರೆ. ಅವರೆಂದರೆ ಕೊಹ್ಲಿ ಮತ್ತು ಅಶ್ವಿನ್‌. ಗಂಭೀರ್‌ ಅವರ ಈ ತಂಡವನ್ನು ನೋಡಿ ಕೆಲ ನೆಟ್ಟಿಗರು ಟಿ20 ವಿಶ್ವಕಪ್‌ ಗೆದ್ದ ನಾಯಕ ರೋಹಿತ್‌ ಶರ್ಮ ಮತ್ತು ವಿಶ್ವದ ಸ್ಟಾರ್‌ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರನ್ನು ಕೈ ಬಿಟ್ಟಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಮಾಜಿ ನಾಯಕ ಸೌರವ್‌ ಗಂಗೂಲಿಗೂ ಅವಕಾಶ ನೀಡಬೇಕಿತ್ತು ಎಂದು ಹೇಳಿದ್ದಾರೆ.

ಗಂಭೀರ್ ಅವರ ಭಾರತ ಸಾರ್ವಕಾಲಿಕ ತಂಡ

ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂಎಸ್ ಧೋನಿ (ವಿ.ಕೀ), ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್, ಇರ್ಫಾನ್ ಪಠಾಣ್, ಜಹೀರ್ ಖಾನ್.