Saturday, 14th December 2024

ಯೂರೋ-2020: ಜರ್ಮನಿಗೆ ಸೋತ ಪೋರ್ಚುಗಲ್‌

ಮ್ಯೂನಿಚ್: ಯೂರೋ-2020 ಫುಟ್ಬಾಲ್ ಟೂರ್ನಿಯಲ್ಲಿ ಜರ್ಮನಿ ಶನಿವಾರ ಮ್ಯೂನಿಚ್‌ನಲ್ಲಿ ನಡೆದ ಎಫ್ ಗುಂಪಿನ ಪಂದ್ಯದಲ್ಲಿ ಪೋರ್ಚ್‌ಗಲ್ ತಂಡದ ವಿರುದ್ಧ 4-2 ಗೋಲುಗಳ ಭರ್ಜರಿ ಜಯ ಸಾಧಿಸಿದೆ.

ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್ ಬುಡಾಪೆಸ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಹಂಗೇರಿ ವಿರುದ್ಧ 1-1 ಡ್ರಾ ಸಾಧಿಸಿತು. ಇದರಿಂದಾಗಿ ಬುಧವಾರ ನಡೆಯುವ ಗುಂಪಿನ ಕೊನೆಯ ಪಂದ್ಯಗಳು ಕುತೂಹಲ ಕೆರಳಿಸಿವೆ. ಅಂತಿಮ ಪಂದ್ಯದಲ್ಲಿ ಜರ್ಮನಿ, ಹಂಗೇರಿ ವಿರುದ್ಧ ಸೆಣೆಸಲಿದ್ದು, ಫ್ರಾನ್ಸ್, ಪೋರ್ಚ್‌ಗಲ್ ವಿರುದ್ಧ ಆಡಲಿದೆ.

ಕ್ರಿಸ್ಟಿಯಾನೊ ರೊನಾಲ್ಡೊ 107ನೇ ಅಂತಾರಾಷ್ಟ್ರೀಯ ಗೋಲು ಗಳಿಸಿದರು. ಇವರು ಅಲಿ ದೆಯಿ ಅವರ ಸಾರ್ವಕಾಲಿಕ ದಾಖಲೆ ಸರಿಗಟ್ಟಲು ಕೇವಲ ಎರಡು ಗೋಲುಗಳಿಂದ ಹಿಂದಿದ್ದಾರೆ. ಪೋರ್ಚ್‌ಗಲ್ ಆರಂಭಿಕ ಮುನ್ನಡೆ ಗಳಿಸಿದರೂ ಬಳಿಕ ಜರ್ಮನಿ ಆಟದುದ್ದಕ್ಕೂ ಪ್ರಾಬಲ್ಯ ಮೆರೆಯಿತು. ವಿರಾಮದ ವೇಳೆಗೆ ಜರ್ಮನಿ 2-1 ಗೋಲುಗಳಿಂದ ಮುಂದಿತ್ತು. ರೊಬಿನ್ ಗೋಸೆನ್ಸ್ ಎರಡು ಗೋಲು ಹೊಡೆದು ಅತಿಥೇಯರ ಪ್ರಾಬಲ್ಯಕ್ಕೆ ಕಾರಣರಾದರು. ಪಂದ್ಯ ಮುಗಿಯಲು 24 ನಿಮಿಷ ಇದ್ದಾಗ ಪೋರ್ಚ್‌ಗಲ್ ಮತ್ತೊಂದು ಗೋಲು ಹೊಡೆದು ಅಂತರವನ್ನು 4-2ಕ್ಕೆ ಇಳಿಸಿಕೊಂಡಿತು.

ವಿಶ್ವಕಪ್ ಅಥವಾ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಪೋರ್ಚ್‌ಗಲ್ ವಿರುದ್ಧ ಸತತ ಐದು ಪಂದ್ಯಗಳನ್ನು ಜರ್ಮನಿ ಗೆದ್ದಂತಾಗಿದೆ.