Saturday, 14th December 2024

ಗ್ರೀಕೊ ರೋಮನ್ ಕುಸ್ತಿ ಕೋಚ್‌ ತೆಮೊ ಕಜರಶಿವಿಲಿ ವಜಾ

ನವದೆಹಲಿ: ಗ್ರೀಕೊ ರೋಮನ್ ಕುಸ್ತಿ ಕೋಚ್‌ ತೆಮೊ ಕಜರಶಿವಿಲಿ ಅವರನ್ನು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಶುಕ್ರವಾರ ವಜಾ ಮಾಡಿದೆ. ಒಲಿಂಪಿಕ್ಸ್‌ಗೆ ಭಾರತದ ಗ್ರೀಕೊ ರೋಮ್ ಕುಸ್ತಿಪಟುಗಳ ಪೈಕಿ ಯಾರಿಗೂ ಈ ಬಾರಿ ಅವಕಾಶ ಸಿಗಲಿಲ್ಲ.

ಒಲಿಂಪಿಕ್ಸ್ ವರೆಗೂ ಗ್ರೀಕೊ ರೋಮನ್ ಕುಸ್ತಿಪಟುಗಳಿಗೆ ತರಬೇತಿ ನೀಡಲು ಜಾರ್ಜಿಯಾದ ಕಜರಶಿವಿಲಿ ಅವರೊಂದಿಗೆ 2019ರಲ್ಲಿ ಒಪ್ಪಂದ ಮಾಡಿಕೊಳ್ಳ ಲಾಗಿತ್ತು. ಸೋನೆಪತ್‌ನಲ್ಲಿ ನಡೆದ ರಾಷ್ಟ್ರೀಯ ಶಿಬಿರದಲ್ಲಿ ಅಭ್ಯಾಸ ನಡೆಯು ತ್ತಿತ್ತು.

ಫ್ರೀಸ್ಟೈಲ್ ಕುಸ್ತಿಪಟುಗಳ ಪೈಕಿ ತಲಾ ನಾಲ್ವರು ಪುರುಷರು ಮತ್ತು ಮಹಿಳೆಯರು ಟೋಕಿಯೊ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಭಾರತ ಕುಸ್ತಿ ಫೆಡರೇಷನ್‌ನ ಶಿಫಾರಸಿನ ಮೇರೆಗೆ ಕೋಚ್‌ ಜೊತೆಗಿನ ಒಪ್ಪಂದವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಸಾಯ್ ತಿಳಿಸಿದೆ.

ಕುಸ್ತಿ ಫೆಡರೇಷನ್‌ನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್‌, ಒಲಿಂಪಿಕ್ಸ್ ನಂತರ ಹೊಸ ಕೋಚ್ ನೇಮಕ ಮಾಡಲಾಗುವುದು ಎಂದು ವಿವರಿಸಿದ್ದಾರೆ.

ಫ್ರೀಸ್ಟೈಲ್ ಕೋಚ್‌ ಇರಾನ್‌ನ ಹೊಸೇನ್ ಕರಿಮಿ ಮತ್ತು ಮಹಿಳಾ ವಿಭಾಗದ ಕೋಚ್‌ ಅಮೆರಿಕದ ಆಯಂಡ್ರ್ಯೂ ಕುಕ್ ಅವರನ್ನು ಅವಧಿಗಿಂತ ಮೊದಲೇ ಕುಸ್ತಿ ಫೆಡರೇಷನ್ ವಾಪಸ್ ಕಳುಹಿಸಿತ್ತು. ಅವರ ತಂತ್ರಗಳನ್ನು ಕರಗತ ಮಾಡಿ ಕೊಳ್ಳಲು ಭಾರತದ ಕುಸ್ತಿಪಟುಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿತ್ತು.