ಚೆನ್ನೈ: ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್(Happy Birthday R. Ashwin) ಅವರು ಇಂದು(ಮಂಗಳವಾರ) 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರದಲ್ಲಿರುವ ಅಶ್ವಿನ್‌ಗೆ ಟೀಮ್ ಇಂಡಿಯಾದ ಹಲವು ಮಾಜಿ ಮತ್ತು ಹಾಲಿ ಆಟಗಾರರು ಶುಭಕೋರಿದ್ದಾರೆ. ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್‌ನಲ್ಲಿ ಅಶ್ವಿನ್ ಅವರ ಕ್ರಿಕೆಟ್ ಸಾಧನೆಯ ಫೋಟೊವನ್ನು ಹಂಚಿಕೊಂಡು ವಿಶೇಷವಾಗಿ ಶುಭ ಹಾರೈಸಿದೆ. ಸದ್ಯ ಅಶ್ವಿನ್ ಬಾಂಗ್ಲಾದೇಶ ವಿರುದ್ಧ ಗುರುವಾರ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಯನ್ನಾಡಲು ಚೆನ್ನೈಯಲ್ಲಿ ಅಭ್ಯಾಸ ನಿರತರಾಗಿದ್ದಾರೆ.
ಆರಂಭಿಕ ಜೀವನ
1986ರ ಸೆಪ್ಟಂಬರ್ 17ರಂದು ಚೆನ್ನೈಯಲ್ಲಿ ಜನಿಸಿದ ಅಶ್ವಿನ್ ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಟೆಕ್ ಪದವಿ ಪಡೆದಿದ್ದರೂ ಕ್ರಿಕೆಟ್‌ನತ್ತ ಒಲವು ವ್ಯಕ್ತ ಪಡಿಸಿ ಅಪ್ರತಿಮ ಸಾಧನೆ ಮಾಡಿ ಮಿಂಚಿದ್ದಾರೆ. ಅರಂಭಿಕ ಬ್ಯಾಟ್ಸ್‌ಮನ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು ಕ್ರಮೇಣ ಆಫ್ ಸ್ಪಿನ್ನರ್ ಆಗಿ ರೂಪುಗೊಳ್ಳುವ ಮೊದಲು ಮಧ್ಯಮ ವೇಗಿ ಯಾಗಿಯೂ ಗುರುತಿಸಿಕೊಂಡಿದ್ದರು. 2006ರಲ್ಲಿ ತಮಿಳುನಾಡು ಪರ ರಣಜಿ ಪಂದ್ಯದಲ್ಲಿ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟಿಗೆ ಕಾಲಿಟ್ಟ ಅವರು ಆರು ವಿಕೆಟ್ ಕಿತ್ತು ತನ್ನ ಬೌಲಿಂಗ್ ಶಕ್ತಿಯನ್ನು ತೆರೆದಿಟ್ಟರು. ಆರು ವರ್ಷ ತಂಡದ ನಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು.
ಟೆಸ್ಟ್ ಸಾಧನೆ
2011ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್‌ಗೆ ಪದಾರ್ಪಣೆಗೈದದಲ್ಲದೇ ಐದು ವಿಕೆಟ್ ಕಿತ್ತ ಸಾಧಕರಾಗಿ ಮೂಡಿ ಬಂದರು. ತವರಿನ ಟರ್ನಿಂಗ್ ಟ್ರ್ಯಾಕ್‌ನಲ್ಲಿ ಅಪಾರ ಯಶಸ್ಸು ಸಾಧಿಸಿದ ಅವರು ಆಸ್ಟ್ರೇಲಿಯ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯಲ್ಲಿ 29 ವಿಕೆಟ್ ಕಿತ್ತ ಮೊದಲ ಬೌಲರ್ ಎಂದೆನಿಸಿಕೊಂಡರು. 2010ರ ಜೂನ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಏಕದಿನ ಕ್ರಿಕೆಟಿಗೆ ಪದಾರ್ಪಣೆಗೈದರು. ಏಕದಿನ ಕ್ರಿಕೆಟ್‌ನಲ್ಲಿ 156 ಮತ್ತು ಟಿ20ಯಲ್ಲಿ 72 ವಿಕೆಟ್ ಉರುಳಿಸಿದ ಸಾಧಕರಾಗಿದ್ದರೆ. ಭಾರತ, 2011ರ ವಿಶ್ವಕಪ್, 2013ರ ಚಾಂಪಿಯನ್ ಟ್ರೋಫಿ ಗೆಲ್ಲಲು ಅಶ್ವಿನ್ ಮಹತ್ತರ ಪಾತ್ರ ವಹಿಸಿದ್ದರು.
ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಸರಣಿ ಶ್ರೇಷ್ಠ ಪಡೆದ ಆಟಗಾರ ಎಂಬ ಹೆಗ್ಗಳಿ ಅಶ್ವಿನ್ ಅವರದ್ದಾಗಿದೆ. ಅಶ್ವಿನ್ ಒಟ್ಟು 10 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಶ್ವಿನ್ ಬಳಿಕ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿದ್ದಾರೆ. ಸಚಿನ್ 5 ಬಾರಿ ಈ ಪ್ರಶಸ್ತಿ ಗೆದ್ದಿದ್ದಾರೆ.
ಇದನ್ನೂ ಓದಿ R Ashwin: ಆಸೀಸ್ ಬೌಲರ್‌ಗಳ ದಾಖಲೆ ಮುರಿಯುವ ಸನಿಹದಲ್ಲಿ ಆರ್. ಅಶ್ವಿನ್
ಭಾರತ ಪರ ಭರ್ತಿ 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಶ್ವಿನ್ 516 ವಿಕೆಟ್ ಕಿತ್ತು ಭಾರತ ಪರ ಅತ್ಯಧಿಕ ಟೆಸ್ಟ್ ವಿಕೆಟ್ ಪಡೆದ ಬೌಲರ್‌ಗಳ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 619 ವಿಕೆಟ್ ಕಿತ್ತ ಕನ್ನಡಿಗ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ ಅಶ್ವಿನ್ 9ನೇ ಸ್ಥಾನಿಯಾಗಿದ್ದಾರೆ. 800 ವಿಕೆಟ್ ಪಡೆದಿರುವ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ಗೆ ಅಗ್ರಸ್ಥಾನ.
ದಾಖಲೆ ಸನಿಹ ಅಶ್ವಿನ್
ಅಶ್ವಿನ್ ಬಾಂಗ್ಲಾ ವಿರುದ್ಧ 2 ವಿಕೆಟ್ ಕಿತ್ತರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕೂಟದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ವಿಶ್ವದ 2ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಇನ್ನು 14 ವಿಕೆಟ್ ಪಡೆದರೆ ನಥನ್ ಲಿಯೋನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ. ಸದ್ಯ ಅಶ್ವಿನ್ 35 ಟೆಸ್ಟ್ ಪಂದ್ಯಗಳಲ್ಲಿ 174 ವಿಕೆಟ್ ಪಡೆದಿದ್ದಾರೆ. ಅಗ್ರಸ್ಥಾನಿ ಲಿಯೋನ್ 43 ಟೆಸ್ಟ್ ಪಂದ್ಯಗಳಿಂದ 187 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ಯಾಟ್ ಕಮಿನ್ಸ್ 42 ಟೆಸ್ಟ್ ಪಂದ್ಯ ಪಂದ್ಯಗಳಿಂದ 175 ವಿಕೆಟ್ ಕಿತ್ತಿದ್ದಾರೆ.