Tuesday, 10th September 2024

ಕೆಲವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ: ​ಹರ್ಭಜನ್​ ವಾಗ್ದಾಳಿ

ನವದೆಹಲಿ: ಕೆಲವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಮತಾಂತರದ ಬಗ್ಗೆ ನೀಡಿರುವ ಹೇಳಿಕೆಗೆ ಭಾರತದ ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್ ತೀಕ್ಷ್ಣ ಪ್ರತಿಕ್ರಿಯಿಸಿದ್ದಾರೆ.

ಇಂಜಮಾಮ್ ಉಲ್ ಹಕ್ ಅವರು ವಿಡಿಯೋವೊಂದರಲ್ಲಿ ಮಾತನಾಡುವಾಗ ಹರ್ಭಜನ್​ ಸಿಂಗ್ ಅವರು ಇಸ್ಲಾಂ ಧರ್ಮವನ್ನು ಅನುಸರಿಸಲು ಮುಂದಾಗಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಹರ್ಭಜನ್​ ಸಿಂಗ್​ ಖಾರವಾಗಿ ಪ್ರತಿ ಕ್ರಿಯಿಸಿದ್ದಾರೆ.

ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಮಾತನಾಡಿರುವ ವಿಡಿಯೋದಲ್ಲಿ, ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯದ ಬಳಿಕ ಪಾಕ್ ಇಸ್ಲಾಮಿಕ್ ಬೋಧಕ ತಾರೀಕ್​ ಜಮೀಲ್ ಅವರು ಪಾಕ್​ ತಂಡದ ಆಟಗಾರರೊಂದಿಗೆ ಪ್ರಾರ್ಥನೆ ಮಾಡುತ್ತಿದ್ದರು. ಸಂಜೆ ಪ್ರಾರ್ಥನೆ ವೇಳೆ ಭಾರತದ ಸ್ಟಾರ್ ಆಟಗಾರರಾದ ಇರ್ಫಾನ್​ ಪಠಾಣ್​, ಮೊಹಮ್ಮದ್​ ಕೈಫ್​, ಜಹೀರ್​ ಖಾನ್ ಅವರನ್ನು ನಾವು ಪ್ರಾರ್ಥನೆಗೆ ಆಹ್ವಾನಿಸಿದ್ದೆವು. ಈ ವೇಳೆ ಭಾರತ ತಂಡದ ಇತರ ಆಟಗಾರರ ಜೊತೆ ಹರ್ಭಜನ್ ಸಿಂಗ್​ ಕೂಡ ಬಂದಿದ್ದರು. ಈ ವೇಳೆ ತಾರಿಕ್​ ಜಮೀಲ್​ ಅವರ ಬೋಧನೆಗಳನ್ನು ಕೇಳಿ ಹರ್ಭಜನ್ ಆಕರ್ಷಿತರಾಗಿದ್ದರು ಮತ್ತು ಅವರ ಬೋಧನೆಗಳನ್ನು ಅನುಸರಿಸಬೇಕೆಂದು ಅನಿಸುತ್ತಿದೆ ಎಂದು ಹೇಳಿರುವುದಾಗಿ ಉಲ್​ ಹಕ್​ ತಿಳಿಸಿದ್ದರು.

ವಿಶ್ವಕಪ್​ನಲ್ಲಿ ಪಾಕ್ ತಂಡ ನೀರಸ ಪ್ರದರ್ಶನ ನೀಡಿರುವ ಹಿನ್ನೆಲೆ ಕಳೆದ ಅಕ್ಟೋಬರ್​ 30ರಂದು ಪಾಕಿಸ್ತಾನ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್​ ಉಲ್​ ಹಕ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

Leave a Reply

Your email address will not be published. Required fields are marked *