ಅನಂತಪುರ: ಇದೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿಕೆಟ್ ಪೆಡೆದ ಬಳಿಕ ಬ್ಯಾಟರ್‌ಗೆ ಫ್ಲೈಯಿಂಗ್ ಕಿಸ್(Harshit Rana flying kis) ಮೂಲಕ ಸೆಂಡ್ ಆಫ್ ಮಾಡಿ ಪಂದ್ಯದ ಶುಲ್ಕದ 100 ಪ್ರತಿಶತ ದಂಡ ಮತ್ತು ಒಂದು ಪಂದ್ಯದಿಂದ ಅಮಾನತು ಶಿಕ್ಷೆಗೆ ಗುರಿಯಾಗಿದ್ದ ವೇಗಿ ಹರ್ಷಿತ್ ರಾಣಾ(Harshit Rana) ಆಗಲೇ ಬುದ್ದಿ ಕಲಿಯಬೇಕಿತ್ತು. ಆದರೆ, ಅವರು ಇನ್ನೂ ಬುದ್ದಿ ಕಲಿತಂತೆ ತೋರುತ್ತಿಲ್ಲ. ಗುರುವಾರ ಆರಂಭವಾದ ದೇಶೀಯ ಕ್ರಿಕೆಟ್ ಟೂರ್ನಿಯಾದ ದುಲೀಪ್ ಟ್ರೋಫಿಯಲ್ಲೂ ಇದೇ ರೀತಿ ಸಂಭ್ರಮಾಚರಣೆ ನಡೆಸಿ ಮತ್ತೆ ಟೀಕೆಗೆ ಗುರಿಯಾಗಿದ್ದಾರೆ.
ಅನಂತಪುರದ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ‘ಸಿ’ ಮತ್ತು ಭಾರತ ‘ಡಿ’ ತಂಡಗಳ ನಡುವಣ ಪಂದ್ಯದ ಮೊದಲ ದಿನವಾದ ಗುರುವಾರದಂದು ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ‘ಸಿʼ ತಂಡ 164 ರನ್‌ಗೆ ಸರ್ವಪತನ ಕಂಡಿತು. ಭಾರತ ‘ಡಿ’ ತಂಡ ಸದ್ಯ ಬ್ಯಾಟಿಂಗ್ ನಡೆಸುತ್ತಿದೆ. ಭಾರತ ‘ಸಿʼ ತಂಡದ ನಾಯಕ ಋತುರಾಜ್ ಗಾಯಕ್ವಾಡ್(Ruturaj Gaikwad) ವಿಕೆಟ್ ಕಿತ್ತ ಹರ್ಷಿತ್ ರಾಣಾ ಫ್ಲೈಯಿಂಗ್ ಕಿಸ್ ಮೂಲಕ ಸೆಂಡ್-ಆಫ್ ನೀಡಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ರಾಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ನಿಮ್ಮ ಈ ಕೆಟ್ಟ ಚಾಳಿಯನ್ನು ಬಿಟ್ಟು ಆಟದ ಕಡೆ ಗಮನಕೊಡಿ ಎಂದು ಬುದ್ಧಿವಾದ ಹೇಳಿದ್ದಾರೆ.
ಇದನ್ನೂ ಓದಿ PM Modi: ಪ್ರಧಾನಿ ಮೋದಿ ನೂತನ ಎಸ್‌ಸಿಎ ಉದ್ಘಾಟಿಸುವ ಸಾಧ್ಯತೆ
ಐಪಿಎಲ್‌ನಲ್ಲಿ ದಂಡಕ್ಕೆ ಗುರಿಯಾಗಿದ್ದ ರಾಣಾ
17ನೇ ಸೀಸನ್ ಐಪಿಎಲ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾರಣದಿಂದ ಹರ್ಷಿತ್ ರಾಣಾ ಪಂದ್ಯದ ಶುಲ್ಕದ 100 ಪ್ರತಿಶತ ದಂಡ ಮತ್ತು ಒಂದು ಪಂದ್ಯದಿಂದ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು. ಅವರು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಮಾಡಿದ್ದರು. ಇದಕ್ಕೂ ಮುನ್ನ ಅವರು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದ ವೇಳೆ ಹರ್ಷಿತ್ ರಾಣಾ ಅತಿರೇಕದ ಸಂಭ್ರಮಾಚರಣೆ ಮಾಡಿದ್ದರು. ಇದಕ್ಕಾಗಿ ದಂಡ ಹಾಕಲಾಗಿತ್ತು. ಸುನಿಲ್ ಗಾವಸ್ಕರ್ ಕೂಡ ರಾಣಾ ನಡೆಯನ್ನು ಟೀಕಿಸಿದ್ದರು.