ಲಂಡನ್: 2012ರಲ್ಲಿ ನಡೆದಿದ್ದ ಘಟನೆಯೊಂದಕ್ಕೆ ಸಂಬಂಧಿಸಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ(England captain Heather Knight) ಹೀದರ್ ನೈಟ್(Heather Knight) ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ. ಜತೆಗೆ 1,300 ಡಾಲರ್ (₹1.08 ಲಕ್ಷ) ದಂಡ ಹಾಕಲಾಗಿದೆ. ಕ್ರೀಡಾ ವಿಷಯದ ಛದ್ಮವೇಷ ಪಾರ್ಟಿಯಲ್ಲಿ ಹೀದರ್ ನೈಟ್ ಕಪ್ಪು ಮೆತ್ತಿದ ಮುಖದ ಡ್ರೆಸ್ ಒಂದನ್ನು ಧರಿಸಿದ್ದರು. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುವ ಮೂಲಕ ಆಟಗಾರ್ತಿಯ ನಡೆಯನ್ನು ‘ಜನಾಂಗೀಯ ತಾರತಮ್ಯ’ ಎಂದು ಪರಿಗಣಿಸಿ ಕ್ರಿಕೆಟ್ ಶಿಸ್ತು ಆಯೋಗ ಅವರಿಗೆ ದಂಡ ವಿಧಿಸಿದೆ. ತಮ್ಮ ತಪ್ಪಿನ ಬಗ್ಗೆ ನೈಟ್ ಸ್ವತಃ ಕ್ಷಮೆ ಕೋರಿದ್ದಾರೆ.
“ನಾನು 21 ವರ್ಷವಳಾಗಿದ್ದಾಗ ಮಾಡಿದ ತಪ್ಪಿಗೆ ನಿಜವಾಗಿಯೂ ವಿಷಾದಿಸುತ್ತೇನೆ. ನನ್ನಿಂದ ತಪ್ಪಾಗಿದೆ ಮತ್ತು ಬಹಳ ಹಿಂದೆಯೇ ಪಶ್ಚಾತ್ತಾಪ ಪಟ್ಟಿದ್ದೇನೆ. ನಾನು ಯಾವುದೇ ಜನಾಂಗೀಯ ಅಥವಾ ತಾರತಮ್ಯದ ಉದ್ದೇಶ ಇಟ್ಟುಕೊಂಡು ಈ ಡ್ರೆಸ್ ತೊಟ್ಟಿರಲಿಲ್ಲ” ಎಂದು ಶಿಸ್ತು ಆಯೋಗದ ಅಧಿಕಾರಿ ಓ’ ಗಾರ್ಮನ್ ಅವರಿಗೆ ಮನವರಿಕೆ ಮಾಡಿದ್ದಾರೆ.
ಇಂಗ್ಲೆಂಡ್ ತಂಡ
ಹೀದರ್ ನೈಟ್ (ನಾಯಕಿ), ಡ್ಯಾನಿ ವ್ಯಾಟ್, ಸೋಫಿಯಾ ಡಂಕ್ಲೆ, ನ್ಯಾಟ್ ಸ್ಕಿವರ್-ಬ್ರಂಟ್, ಆಲಿಸ್ ಕ್ಯಾಪ್ಸೆ, ಆಮಿ ಜೋನ್ಸ್ (ವಿ.ಕೀ), ಸೋಫಿ ಎಕ್ಲೆಸ್ಟೋನ್, ಚಾರ್ಲಿ ಡೀನ್, ಸಾರಾ ಗ್ಲೆನ್, ಲಾರೆನ್ ಬೆಲ್, ಮಾಯಾ ಬೌಚಿಯರ್, ಲಿನ್ಸೆ ಸ್ಮಿತ್, ಫ್ರೇಯಾ ಕೆಂಪ್, ಡ್ಯಾನಿ ಗಿಬ್ಸನ್ ಬೆಸ್ ಹೀತ್.
ಇದನ್ನೂ ಓದಿ WTC Final 2025: 3ನೇ ಸ್ಥಾನಕ್ಕೇರಿದ ಲಂಕಾ; ಫೈನಲ್ಗೆ ತೀವ್ರ ಪೈಪೋಟಿ
33 ವರ್ಷದ ಹೀದರ್ ನೈಟ್ 2016 ರಲ್ಲಿ ಇಂಗ್ಲೆಂಡ್ ತಂಡದ ನಾಯಕಿಯಾಗಿ ನೇಮಕಗೊಂಡರು. ಮುಂದಿನ ತಿಂಗಳು ದುಬೈನಲ್ಲಿ ಆರಂಭಗೊಳ್ಳಲಿರುವ ಮಹಿಳಾ T20 ವಿಶ್ವಕಪ್ನಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ನೈಟ್ ಇಂಗ್ಲೆಂಡ್ ಪರ 119 ಟಿ20, 143 ಏಕದಿನ ಮತ್ತು 12 ಟೆಸ್ಟ್ ಪಂದ್ಯಗಳನ್ನಾಡಿ ಒಟ್ಟು 6,783 ರನ್ ಬಾರಿಸಿದ್ದಾರೆ. 5 ಶತಕ ಮತ್ತು 37 ಅರ್ಧಶತಕ ಬಾರಿಸಿದ್ದಾರೆ.