Saturday, 30th November 2024

IND vs AUS: ಅಡಿಲೇಡ್‌ ಟೆಸ್ಟ್‌ಗೆ ಮಾರ್ನಸ್‌ ಲಾಬುಶೇನ್‌ ಬೇಡ ಎಂದ ಮಿಚೆಲ್‌ ಜಾನ್ಸನ್‌!

IND vs AUS: ʻAustralia should drop Marnus Labuschagne for Adelaide Test vs Indiaʼ,says Mitchell Johnson

ನವದೆಹಲಿ: ಭಾರತ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ (IND vs AUS) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಾಬುಶೇನ್‌ ಅವರನ್ನು ಅಡಿಲೇಡ್‌ ಟೆಸ್ಟ್‌ ಪಂದ್ಯದಿಂದ ಕೈ ಬಿಡಬೇಕೆಂದು ಆಸೀಸ್‌ ಮಾಜಿ ವೇಗಿ ಮಿಚೆಲ್‌ ಜಾನ್ಸನ್‌ ಆಗ್ರಹಿಸಿದ್ದಾರೆ. ಪರ್ತ್‌ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಿಂದ ಮಾರ್ನಸ್‌ ಲಾಬುಶೇನ್‌ ಅವರು ಕ್ರಮವಾಗಿ 2 ಮತ್ತು 3 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದರು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 295 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತ್ತು.

ನೈಟ್ಲೀಗೆ ತಾವು ಬರೆದಿರುವ ಅಂಕಣದಲ್ಲಿ ಮಿಚೆಲ್‌ ಜಾನ್ಸನ್‌, ಔಟ್‌ ಆಫ್‌ ಫಾರ್ಮ್‌ ಮಾರ್ನಸ್‌ ಲಾಬುಶೇನ್‌ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ. ಮಾರ್ನಸ್‌ ಲಾಬುಶೇನ್‌ ಅವರು ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದೇಶಿ ಕ್ರಿಕೆಟ್‌ಗೆ ಮರಳಿ ಫಾರ್ಮ್‌ ಕಂಡುಕೊಂಡು ರಾಷ್ಟ್ರೀಯ ತಂಡಕ್ಕೆ ಹಿಂತಿರುಗಬೇಕೆಂದು ಸಲಹೆ ನೀಡಿದ್ದಾರೆ.

IND vs AUS: ದ್ವಿತೀಯ ಟೆಸ್ಟ್‌ಗೆ ಭಾರತ ಆಡುವ ಬಳಗದ ಆಯ್ಕೆಯೇ ಜಟಿಲ

“ಮಾರ್ನಸ್‌ ಲಾಬುಶೇನ್‌ ಅವರು ಸತತವಾಗಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿದ್ದಾರೆ. ಹಾಗಾಗಿ ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ ಪಂದ್ಯಕ್ಕೆ ಅವರ ಸ್ಥಾನದಲ್ಲಿ ಬೇರೆ ಆಟಗಾರ ಆಡಬೇಕು. ಆ ಮೂಲಕ ಪರ್ತ್‌ ಟೆಸ್ಟ್‌ನಲ್ಲಿ ಸಂಭವಿಸಿದ್ದ ಅನಾಹುತವನ್ನು ಎರಡನೇ ಟೆಸ್ಟ್‌ನಲ್ಲಿ ಯಾರಾದರೂ ಸರಿಪಡಿಸಬೇಕು,” ಎಂದು ಮಿಚೆಲ್‌ ಜಾನ್ಸನ್‌ ಹೇಳಿದ್ದಾರೆ.

ಮಾರ್ನಸ್‌ ಲಾನುಶೇನ್‌ ಆಸ್ಟ್ರೇಲಿಯಾ ಟೆಸ್ಟ್‌ ತಂಡಕ್ಕೆ ಕೀ ಬ್ಯಾಟ್ಸ್‌ಮನ್‌. ಅವರು ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನದಿಂದ ಇಲ್ಲಿಯವರೆಗೂ ಆಡಿದ 51 ಟೆಸ್ಟ್‌ ಪಂದ್ಯಗಳಿಂದ 48ರ ಸರಾಸರಿಯಲ್ಲಿ 4119 ರನ್‌ಗಳನ್ನು ಕಲೆ ಹಾಕಿದ್ದಾರೆ. ಆದರೆ, ಅವರು ಇತ್ತೀಚಿನ ದಿನಗಳಲ್ಲಿ ಸತತವಾಗಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿದ್ದಾರೆ. ಕಳೆದ 10 ಇನಿಂಗ್ಸ್‌ಗಳಿಂದ ಅವರು ಒಂದೇ ಒಂದು ಇನಿಂಗ್ಸ್‌ನಲ್ಲಿ ಮಾತ್ರ ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಿದ್ದರು. ಇನ್ನುಳಿದ 9 ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ.

IND vs AUS: ಪಿಂಕ್‌ ಬಾಲ್‌ ಅಭ್ಯಾಸ ಪಂದ್ಯಕ್ಕೂ ಮುನ್ನ ಉಭಯ ತಂಡಗಳಿಗೆ ಮಳೆ ಭೀತಿ!

“ರಾಷ್ಟ್ರೀಯ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒತ್ತಡಕ್ಕೆ ಒಳಗಾಗುವ ಬದಲು ಮಾರ್ನಸ್‌ ಲಾಬುಶೇನ್‌ ಶೆಫಿಲ್ಡ್‌ ಶೀಲ್ಡ್‌ ಅಥವಾ ಯಾವುದಾದರೂ ಕ್ಲಬ್‌ ಕ್ರಿಕೆಟ್‌ ಆಡಬೇಕೆಂದು ನಾನು ಬಯಸುತ್ತೇನೆ. ಭಾರತದ ಎದುರು ಜಸ್‌ಪ್ರೀತ್‌ ಬುಮ್ರಾ ಎದುರು ಅಪಾಯಕ್ಕೆ ಒಳಗಾಗುವ ಬದಲು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿರಾಮ ಪಡೆದು ದೇಶಿ ಕ್ರಿಕೆಟ್‌ ಆಡುವುದು ಒಳಿತು,” ಎಂದು ಮಾಜಿ ವೇಗಿ ಆಗ್ರಹಿಸಿದ್ದಾರೆ.

“ಆಸ್ಟ್ರೇಲಿಯಾ ಟೆಸ್ಟ್‌ ತಂಡದಿಂದ ಮಾರ್ನಸ್‌ ಲಾಬುಶೇನ್‌ ಅವರನ್ನು ದೀರ್ಘಾವಧಿ ಹೊರಗಿಡಬೇಕು ಅಥವಾ ಅವರು ಮೂರನೇ ಕ್ರಮಾಂಕಕ್ಕೆ ಕೆಟ್ಟ ಆಟಗಾರನೇನಲ್ಲ. ಅವರು ಸದ್ಯ ಫಾರ್ಮ್‌ನಲ್ಲಿ ಇಲ್ಲ ಅಷ್ಟೆ. ಅವರು ರಾಷ್ಟ್ರೀಯ ತಂಡದಿಂದ ಅಲ್ಪ ವಿರಾಮ ಪಡೆದು ಫಾರ್ಮ್‌ ಕಂಡುಕೊಂಡು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಬೇಕು. ಏಕೆಂದರೆ ಅವರು ತಂಡಕ್ಕೆ ಅತ್ಯಂತ ಕೀ ಬ್ಯಾಟ್ಸ್‌ಮನ್‌,” ಎಂದು ಮಿಚೆಲ್‌ ಜಾನ್ಸನ್‌ ತಿಳಿಸಿದ್ದಾರೆ.