ಅಡಿಲೇಡ್: ಅಡಿಲೇಡ್ನ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ (IND vs AUS) ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಭಾರತಕ್ಕೆ ತೀವ್ರ ಮುಖಭಂಗವಾಗಿದೆ. 3ನೇ ದಿನಕ್ಕೆ ಆಟ ಅಂತ್ಯವಾಗಿದ್ದು, ಆಸ್ಟ್ರೇಲಿಯಾ ಭರ್ಜರಿ ಜಯ ಗಳಿಸಿ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಆ ಮೂಲಕ ಸರಣಿ ಇದೀಗ 1-1ರಿಂದ ಸಮಬಲವಾಗಿದೆ.
ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ175 ರನ್ ಗಳಿಸಿ 19 ರನ್‌ಗಳ ಸುಲಭ ಗುರಿಯನ್ನು ನಿಗದಿಪಡಿಸಿತು. ಈ ಪಿಂಕ್ ಬಾಲ್ ಟೆಸ್ಟ್‌ನ 3ನೇ ದಿನವಾರ ಭಾನುವಾರ ಆಸ್ಟ್ರೇಲಿಯಾ ಈ ಗುರಿಯನ್ನು ವಿಕೆಟ್ ನಷ್ಟವಿಲ್ಲದೆ ಗೆದ್ದು ಬೀಗಿದೆ.
Massive win in Adelaide for Australia as they level the series 1-1 💪#WTC25 | #AUSvIND 📝: https://t.co/D4QfJY2DY1 pic.twitter.com/RXZusN98wU
— ICC (@ICC) December 8, 2024
ಪಂದ್ಯದ ವಿವರ
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಮಿಚೆಲ್ ಸ್ಟಾರ್ಕ್ ಅವರ ಮಾರಕ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ ಕೇವಲ 180 ರನ್ಗಳಿಗೆ ಆಲೌಟ್ ಆಯಿತು. ಈ ಪೈಕಿ ನಿತೀಶ್ ರೆಡ್ಡಿ 42 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. ಕೆ.ಎಲ್.ರಾಹುಲ್ 37 ಮತ್ತು ಶುಭಮನ್ ಗಿಲ್ 31 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಬ್ಯಾಟ್‌ನಿಂದ ಹೆಚ್ಚಿನ ರನ್ ಹರಿದು ಬರಲಿಲ್ಲ. ಆಸ್ಟ್ರೇಲಿಯಾ ಪರ ಸ್ಟಾರ್ಕ್ ಕೇವಲ 48 ರನ್ ನೀಡಿ 6 ವಿಕೆಟ್ ಕಬಳಿಸಿ ಭಾರತಕ್ಕೆ ಸಿಂಹಸ್ವಪ್ನವಾಗಿ ಕಾಡಿದರು.
ಇದಕ್ಕೆ ಪ್ರತಿಯಾಗಿ ಮೈದಾನಕ್ಕಿಳಿದ ಆಸಿಸ್ ಮೊದಲ ಇನ್ನಿಂಗ್ಸ್‌ನಲ್ಲಿ 337 ರನ್ ಪೇರಿಸಿ ಆಲೌಟ್ ಆಯಿತು. ಆಸಿಸ್ ಪರ ಟ್ರಾವಿಸ್ ಹೆಡ್ 140 ಮತ್ತು ಮಾರ್ನಸ್ ಲಾಬುಶೇನ್ 64 ರನ್ ಕಲೆ ಹಾಕಿದರು.
157 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಮತ್ತೊಮ್ಮೆ ಎಡವಿತು. ಮೊದಲ ಇನ್ನಿಂಗ್ಸ್‌ನಲ್ಲಿ ಮಿಂಚಿದ ಆರಂಭಿಕರಾದ ಕೆ.ಎಲ್. ರಾಹುಲ್ (7) ಬೇಗನೇ ಔಟಾದರು. ನಿತೀಶ್ ಕುಮಾರ್ ರೆಡ್ಡಿ 42 ರನ್ ಬಾರಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. ಯಶಸ್ವಿ ಜೈಸ್ವಾಲ್ (24), ಶುಭ್‌ಮನ್ ಗಿಲ್ (28), ರಿಷಬ್ ಪಂತ್ (28) ಮತ್ತು ವಿರಾಟ್ ಕೊಹ್ಲಿ (11) ರನ್ ಕಲೆ ಹಾಕಲಷ್ಟೇ ಶಕ್ತರಾದರು. ದ್ವಿತೀಯ ದಿನದಾಟದ ಅಂತ್ಯಕ್ಕೆ ಶನಿವಾರ ಟೀಮ್ ಇಂಡಿಯಾ 5 ವಿಕೆಟ್ ಕಳೆದುಕೊಂಡು 128 ರನ್ ಕಲೆಹಾಕಿತ್ತು. ಭಾನುವಾರ ಮತ್ತೆ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ 47 ರನ್ ಗಳಿಸಲಷ್ಟೇ ಶಕ್ತವಾಗಿ 175 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಆಸಿಸ್‌ಗೆ 19 ರನ್‌ಗಳ ಸವಾಲು ಒಡ್ಡಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಾಡಿದ ಪ್ಯಾಟ್ ಕಮ್ಮಿನ್ಸ್ 5 ವಿಕೆಟ್ ಕಬಳಿಸಿದರು. ಇದನ್ನು ಬೆನ್ನತ್ತಿದ ಆಸ್ಟ್ರೇಲಿಯಾ 10 ವಿಕೆಟ್‌ಗಳಿಂದ ಗೆದ್ದು ಬೀಗಿತು.
ಸಂಕ್ಷಿಪ್ತ ಸ್ಕೋರ್
ಮೊದಲ ಇನ್ನಿಂಗ್ಸ್:
ಭಾರತ: 180 ರನ್
ಆಸ್ಟ್ರೇಲಿಯಾ: 337 ರನ್
ದ್ವಿತೀಯ ಇನ್ನಿಂಗ್ಸ್:
ಭಾರತ: 175 ರನ್
ಆಸ್ಟ್ರೇಲಿಯಾ: 19 ರನ್
ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ 295 ರನ್ ಅಂತರದ ಗೆಲುವು ಸಾಧಿಸಿತ್ತು.
ಈ ಸುದ್ದಿಯನ್ನೂ ಓದಿ: IND vs AUS: ರೋಹಿತ್ ಶರ್ಮಾ ವೈಫಲ್ಯಕ್ಕೆ ಕಾರಣ ತಿಳಿಸಿದ ಸುನೀಲ್ ಗವಾಸ್ಕರ್!