Saturday, 14th December 2024

IND VS AUS: 3ನೇ ಟೆಸ್ಟ್‌ನಲ್ಲಿ ಅಶ್ವಿನ್‌ ಬದಲು ವಾಷಿಂಗ್ಟನ್‌ ಸುಂದರ್‌ಗೆ ಅವಕಾಶ ನೀಡಿ ಎಂದ ಚೇತೇಶ್ವರ್‌ ಪೂಜಾರ!

IND VS AUS :

ಕ್ಯಾನ್‌ಬೆರಾ: ಅಡಿಲೇಡ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿರುವ ಭಾರತ (IND VS AUS) ತಂಡ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ಗೆ  ಸಜ್ಜಾಗುತ್ತಿದೆ. ಈಗಾಗಲೇ ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಸಾಧಿಸಿರುವ ಉಭಯ ತಂಡಗಳಿಗೆ ಮುಂದೆ ನಡೆಯಲಿರುವ ಮೂರನೇ ಪಂದ್ಯ ಬಹು ಮಹತ್ವದ್ದಾಗಿದೆ. ಹೀಗಿರುವಾಗ ಭಾರತೀಯ ಆಟಗಾರ ಚೇತೇಶ್ವರ್‌ ಪೂಜಾರ (Cheteshwar Pujara) ಟೀಮ್‌ ಇಂಡಿಯಾದ ಪ್ಲೇಯಿಂಗ್‌ XI ನಲ್ಲಿ ಮಹತ್ವದ ಬದಲಾವಣೆ ತರಲು ಸಲಹೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪೂಜಾರ, ಮೂರನೇ ಪಂದ್ಯ ಗೆಲ್ಲಲು ಹನ್ನೊಂದರ ಬಳಗದಲ್ಲಿ ಬದಲಾವಣೆ ತರಲು ಸೂಚಿಸಿದ್ದಾರೆ. ಆರ್ ಅಶ್ವಿನ್ (R. Ashwin) ಬದಲಿಗೆ ವಾಷಿಂಗ್ಟನ್ ಸುಂದರ್‌ಗೆ ಅವಕಾಶ ಸಿಗಬೇಕು ಎಂದು ಹೇಳಿದ್ದಾರೆ.

“ಅಡಿಲೇಡ್‌ನಲ್ಲಿ ಸುಂದರ್ ಬದಲಿಗೆ ಆಡಿದ್ದ ಅಶ್ವಿನ್‌ ಮೊದಲ ಇನಿಂಗ್ಸ್‌ನಲ್ಲಿ 18 ಓವರ್‌ಗಳನ್ನು ಬೌಲ್ ಮಾಡಿದ್ದರು. ಇದರಲ್ಲಿ ಅವರು 53 ರನ್ ನೀಡಿ ಕೇವಲ ಒಂದು ವಿಕೆಟ್ ಮಾತ್ರ ಪಡೆದಿದ್ದರು. ಬ್ಯಾಟಿಂಗ್‌ನಲ್ಲಿಯೂ ಹೇಳಿಕೊಳ್ಳುವ ಪ್ರದರ್ಶನ ಅವರಿಂದ ಬರಲಿಲ್ಲ. ಪರ್ತ್‌ ಟೆಸ್ಟ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ವಾಷಿಂಗ್ಟನ್‌ ಸುಂದರ್‌ ಉತ್ತಮವಾಗಿ ಆಟ ಆಡಿದ್ದರು,” ಎಂದು ಹೇಳಿದ್ದಾರೆ.

ಇದರ ಜೊತೆಗೆ ಹರ್ಷಿತ್ ರಾಣಾ ಬದಲಿಗೆ ಬೇರೆ ಯಾರಾದರೂ ತಂಡಕ್ಕೆ ಬರಬೇಕಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೂಜಾರ, ರಾಣಾ ಅವರಿಗೆ ಸೂಕ್ತ ಬೆಂಬಲ ಸಿಗಬೇಕು ಆತನಲ್ಲಿ ಪ್ರತಿಭೆಯಿದೆ ಎಂದು ಹೇಳಿದ್ದಾರೆ.

“ಮೊದಲ ಟೆಸ್ಟ್‌ ಪಂದ್ಯದಲ್ಲಿ ರಾಣಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಯಾವುದೋ ಒಂದು ಪಂದ್ಯವನ್ನು ಆಧಾರವಾಗಿಟ್ಟುಕೊಂಡು ಅವರನ್ನು ತಂಡದಿಂದ ಕೈಬಿಡಲು ಸಾಧ್ಯವಿಲ್ಲ. ಟ್ರಾವಿಸ್ ಹೆಡ್ ಅವರ ವಿಕೆಟ್‌ ಸೇರಿದಂತೆ ತಂಡದ ಗೆಲುವಿನಲ್ಲಿ ಅವರ ಪಾತ್ರವಿದೆ,” ಎಂದು ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಡಿ. 14 ರಿಂದ ಶುರುವಾಗಲಿರುವ ಮೂರನೇ ಪಂದ್ಯಕ್ಕಾಗಿ ಭಾರತ ತಂಡ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಏತನ್ಮಧ್ಯೆ,  ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಹತ್ತು ವಿಕೆಟ್‌ಗಳ ಸೋಲಿನ ನಂತರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿಯ ಮೇಲೆ ಭಾರೀ ಹೊಡೆದ ಬಿದ್ದಂತಾಗಿದೆ. ರೋಹಿತ್ ಶರ್ಮಾ ನೇತೃತ್ವದ ತಂಡವು ಸತತ ಮೂರನೇ ಬಾರಿ ಫೈನಲ್‌ಗೆ ಅರ್ಹತೆ ಪಡೆಯಲು ಈ ಸರಣಿಯನ್ನು 3-1 ಅಥವಾ 4-1 ಅಂತರದಿಂದ ಗೆಲ್ಲಬೇಕಾಗಿದೆ. ಅಡಿಲೇಡ್ ಸೋಲಿನ ನಂತರ, ಭಾರತವು ಈಗ ಡಬ್ಲ್ಯುಟಿಸಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾವು ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ತನ್ನ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.

ಈ ಸುದ್ದಿಯನ್ನೂ ಓದಿ : IND vs AUS: ಟೆಸ್ಟ್‌ ಕ್ರಿಕೆಟ್‌ನ ವಿಶೇಷ ದಾಖಲೆಯ ಸನಿಹದಲ್ಲಿ ಜಸ್‌ಪ್ರೀತ್‌ ಬುಮ್ರಾ!