Saturday, 23rd November 2024

IND vs AUS: ʻಹೊರಗಡೆ ಮಾತುಗಳಿಗೆ ಕಿವಿ ಕೊಡಬೇಡಿʼ-ಗೌತಮ್ ಗಂಭೀರ್‌ಗೆ ರವಿ ಶಾಸ್ತ್ರಿ ಸಲಹೆ!

Ravi Shastri's advice to Gambhir

ಪರ್ತ್‌: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯ (IND vs AUS) ನಿಮಿತ್ತ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ಗೆ ಮಾಜಿ ಕ್ರಿಕೆಟಿಗ ಮತ್ತು ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಮಹತ್ವದ ಸಲಹೆ ನೀಡಿದ್ದಾರೆ. ಈ ಸರಣಿಯಲ್ಲಿ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಹಾಗೂ ಹೊರಗಡೆ ಮಾತುಗಳಿಗೆ ಕಿವಿ ಕೊಡದೆ ತಾಳ್ಮೆ ಮತ್ತು ಶಾಂತ ಸ್ವಭಾವವನ್ನು ಕಾಪಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಸರಣಿ ಗೆಲುವಿನ ಬಳಿಕ ಭಾರತ ತಂಡ, ನ್ಯೂಜಿಲೆಂಡ್‌ ವಿರುದ್ದ ಮೂರು ಪಂದ್ಯಗಳ ತವರು ಟೆಸ್ಟ್‌ ಸರಣಿಯಲ್ಲಿ 0-3 ಅಂತರದಲ್ಲಿ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಷ್‌ ಆಘಾತ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಗೌತಮ್‌ ಗಂಭೀರ್‌ ಅವರ ಮೇಲೆ ಆಸ್ಟ್ರೇಲಿಯಾ ಸರಣಿಯಲ್ಲಿ ಸಾಕಷ್ಟು ಒತ್ತಡವಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್‌ ಸ್ಪೋರ್ಟ್ಸ್‌ ರೂಮ್‌ನಲ್ಲಿ ಮಾತನಾಡಿದ ರವಿ ಶಾಸ್ತ್ರಿ, ವಿಶೇಷವಾಗಿ ಗೌತಮ್‌ ಗಂಭೀರ್‌ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ.

IND vs AUS: ʻಜೈಸ್ವಾಲ್‌-ಗಿಲ್‌ ಓಪನರ್ಸ್‌ʼ, ಪರ್ತ್‌ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ರವಿ ಶಾಸ್ತ್ರಿ!

ಗೌತಮ್‌ ಗಂಭೀರ್‌ಗೆ ರವಿ ಶಾಸ್ತ್ರಿ ಮಹತ್ವದ ಸಲಹೆ

“ಮೊದಲನೇಯದಾಗಿ ಗೌತಮ್‌ ಗಂಭೀರ್‌ಗೆ ಶಾಂತ ಸ್ವಭಾವವನ್ನು ಕಾಪಾಡಿಕೊಳ್ಳುವಂತೆ ನಾನು ಸಲಹೆ ನೀಡುತ್ತೇನೆ ಹಾಗೂ ಯಾವುದೇ ಹಂತದಲ್ಲಿ ಹೊರಗಡೆಯ ಮಾತುಗಳಿಗೆ ಕಿವಿ ಕೊಡಬಾರದು. ಏಕೆಂದರೆ ಇದರಿಂದ ಕೆಲ ಆತುರ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭಗಳು ಎದುರಾಗಬಹುದು. ನಿಮ್ಮ ಆಟಗಾರರನ್ನು ನೀವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ತವರಿನಲ್ಲಿ ನಿಮ್ಮ ಆಟಗಾರರ ಕೆಟ್ಟ ಸಂದರ್ಭವನ್ನು ನೀವು ನೋಡಿದ್ದೀರಿ ಹಾಗೂ ವಿದೇಶ ನೆಲದಲ್ಲಿಯೂ ನೀವು ನೋಡಿದ್ದೀರಿ. ಹಾಗಾಗಿ ಆಟಗಾರರಿಗೆ ಯಾವುದು ಅಗತ್ಯವಿದೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಸನ್ನಿವೇಶವನ್ನು ಅರಿತುಕೊಂಡು ಯಾವ ನಿರ್ಧಾರಗಳು ಹಾಗೂ ಸಂಗತಿಗಳನ್ನು ತೆಗೆದುಕೊಳ್ಳಬೇಕೆಂಬುದರ ಕಡೆಗೆ ಗಮನ ಕೊಡಬೇಕು,”ಎಂದು ರವಿ ಶಾಸ್ತ್ರಿ ಸಲಹೆ ನೀಡಿದ್ದಾರೆ.

ಒಂದೇ ದಿನ ಅಥವಾ ಒಂದೇ ರಾತ್ರಿ ತಂಡದ ಆಟಗಾರರ ಜೊತೆ ಉತ್ತಮ ಭಾಂದವ್ಯವನ್ನು ವೃದ್ದಿಸಲು ಸಾಧ್ಯವಿಲ್ಲ ಹಾಗೂ ಇದು ಹಂತ-ಹಂತವಾಗಿ ನಡೆಯಬೇಕಾಗುತ್ತದೆ. ಹಾಗಾಗಿ ತಮ್ಮ ತಂಡದಲ್ಲಿನ ಪ್ರತಿಯೊಬ್ಬ ಆಟಗಾರರ ಯಶಸ್ಸಿನ ಕಡೆಗೆ ಕೋಚ್‌ ಗೌತಮ್‌ ಗಂಭೀರ್‌ ಗಮನ ಕೊಡಬೇಕು ಎಂದು ಮಾಜಿ ಹೆಡ್‌ ಕೋಚ್‌ ಹೇಳಿದ್ದಾರೆ.

IND vs AUS: ವಿರಾಟ್‌ ಕೊಹ್ಲಿ ಅಲ್ಲ, ಭಾರತಕ್ಕೆ ಯಶಸ್ವಿ ಜೈಸ್ವಾಲ್‌ ಎಕ್ಸ್‌ ಫ್ಯಾಕ್ಟರ್‌ ಎಂದ ರವಿಶಾಸ್ತ್ರಿ!

“ತಂಡದಲ್ಲಿ ಪ್ರತಿಯೊಬ್ಬರನ್ನೂ ಅರ್ಥ ಮಾಡಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ನೀವು ಐಪಿಎಲ್‌ನ ಹೊರಗಡೆಯ ಆಟಗಾರರನ್ನು ನೋಡಿದ್ದೀರಿ ಹಾಗೂ ನಿಮ್ಮ ಫ್ರಾಂಚೈಸಿಯಲ್ಲಿದ್ದ ಆಟಗಾರರನ್ನು ಕೂಡ ನೋಡಿದ್ದೀರಿ ಹಾಗೂ ಅವರ ಜೊತೆ ಕೆಲಸ ಮಾಡಿದ್ದೀರಿ. ಆದರೆ, ರಾಷ್ಟ್ರೀಯ ತಂಡಕ್ಕೆ ವಿಭಿನ್ನ ಆಟಗಾರರು ವಿಭಿನ್ನ ಮೈಂಡ್‌ಸೆಟ್‌ನೊಂದಿಗೆ ಬಂದಿರುತ್ತಾರೆ. ಹಾಗಾಗಿ ಪ್ರತಿಯೊಬ್ಬ ಆಟಗಾರರನ್ನು ಆಳವಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯ. ಯಾವುದೇ ಆಟಗಾರ ಕಠಿಣ ಸಂದರ್ಭಗಳನ್ನು ಎದುರಿಸುವ ವೇಳೆ ಅವರಲ್ಲಿ ಆತ್ಮ ವಿಶ್ವಾಸ ತುಂಬುವುದು ಹಾಗೂ ಅವರಲ್ಲಿ ಯಶಸ್ಸಿನ ಮನಸ್ಥಿತಿಯನ್ನು ರೂಪಿಸಬೇಕಾಗುತ್ತದೆ,” ಎಂದು ರವಿ ಶಾಸ್ತ್ರಿ ಸಲಹೆ ನೀಡಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ಶುಕ್ರವಾರದಿಂದ ಪರ್ತ್‌ನ ಆಪ್ಟಸ್‌ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 07: 50ಕ್ಕೆ ಆರಂಭವಾಗಲಿದೆ. ನಾಯಕ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಉಪ ನಾಯಕ ಜಸ್‌ಪ್ರೀತ್‌ ಬುಮ್ರಾ ಮುನ್ನಡೆಸಲಿದ್ದಾರೆ.