Saturday, 23rd November 2024

IND vs AUS: ಪರ್ತ್‌ ಪಿಚ್‌ ಅನ್ನು ತನ್ನ ಪತ್ನಿಗೆ ಹೋಲಿಕೆ ಮಾಡಿ ಟೀಕಿಸಿದ ಇರ್ಫಾನ್‌ ಪಠಾಣ್‌!

Irfan Pathan comes up with cheeky dig at Perth Pitch, post goes viral

ಪರ್ತ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿಯ ಮೊದಲನೇ ಪಂದ್ಯ ನಡೆಯುತ್ತಿರುವ ಪರ್ತ್‌ನ ಆಪ್ಟಸ್‌ ಕ್ರಿಕೆಟ್‌ ಸ್ಟೇಡಿಯಂನ ಪಿಚ್‌ ಅನ್ನು ಟೀಮ್‌ ಇಂಡಿಯಾ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಟೀಕಿಸಿದ್ದಾರೆ. ಪಂದ್ಯದ ಮೊದಲನೇ ದಿನ ಇಲ್ಲಿನ ಪರ್ತ್‌ ವೇಗದ ಬೌಲರ್‌ಗಳಿಗೆ ನೆರವು ನೀಡಿತ್ತು ಹಾಗೂ ಬ್ಯಾಟ್ಸ್‌ಮನ್‌ ದೀರ್ಘಾವಧಿ ಕ್ರೀಸ್‌ನಲ್ಲಿ ನಿಂತು ಬ್ಯಾಟ್‌ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರಂಭಿಕ ದಿನವೇ ಎರಡೂ ತಂಡಗಳ 17 ವಿಕೆಟ್‌ಗಳನ್ನು ಫಾಸ್ಟ್‌ ಬೌಲರ್‌ಗಳು ಕಬಳಿಸಿದ್ದರು.

ಪರ್ತ್‌ನ ಪಿಚ್‌ ಮೊದಲನೇ ದಿನ ಫಾಸ್ಟ್‌ ಬೌಲರ್‌ಗಳಿಗೆ ನೆರವು ನೀಡಿತ್ತು ಆದರೆ, ಎರಡನೇ ದಿನವಾದ ಶನಿವಾರ ಪಿಚ್‌ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿ ತಿರುಗಿತ್ತು. ಈ ಹಿನ್ನೆಲೆಯಲ್ಲಿ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 172 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಭಾರತ ತಂಡ 218 ರನ್‌ಗಳ ಮುನ್ನಡೆಯನ್ನು ಪಡೆದಿದೆ. ಕೆಎಲ್‌ ರಾಹುಲ್‌ ಅಜೇಯ 62 ರನ್‌ಗಳನ್ನು ಗಳಿಸಿದರೆ, ಯಶಸ್ವಿ ಜೈಸ್ವಾಲ್‌ ಅಜೇಯ 90 ರನ್‌ಗಳನ್ನು ಗಳಿಸಿದ್ದಾರೆ ಹಾಗೂ ಮೂರನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

IND vs AUS: 46 ರನ್‌ ಮುನ್ನಡೆ ಸಾಧಿಸಿದ ಭಾರತ; ಆಸೀಸ್‌ 104ಕ್ಕೆ ಆಲೌಟ್‌ 

ಪರ್ತ್‌ ಪಿಚ್‌ ಅನ್ನು ಟೀಕಿಸಿದ ಇರ್ಫಾನ್‌ ಪಠಾಣ್‌

ಇದಕ್ಕೂ ಮುನ್ನ ಮೊದಲನೇ ದಿನ ಟಾಸ್‌ ಗೆದ್ದು ಬ್ಯಾಟ್‌ ಮಾಡಿದ್ದ ಭಾರತ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 150 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಬಳಿಕ ಪ್ರಥಮ ಇನಿಂಗ್ಸ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ಕೇವಲ 104 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು ಹಾಗೂ 46 ರನ್‌ಗಳ ಹಿನ್ನಡೆಯನ್ನು ಅನುಭವಿಸಿತ್ತು. ಆದರೆ, ಮೊದಲನೇ ದಿನ ಹಾಗೂ ಎರಡನೇ ದಿನ ಪಿಚ್‌ ಸಂಪೂರ್ಣ ಬದಲಾವಣೆಯಾಗಿದೆ. ಈ ಬಗ್ಗೆ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ ಇರ್ಫಾನ್‌ ಪಠಾಣ್‌, ಪರ್ತ್‌ ಪಿಚ್‌ ಅನ್ನು ತಮ್ಮ ಪತ್ನಿಯ ಮನಸ್ಥಿತಿಗೆ ಹೋಲಿಕೆ ಮಾಡಿದ್ದಾರೆ. “ನನ್ನ ಪತ್ನಿಯ ಮನಸ್ಥಿತಿಗಿಂತ ಪರ್ತ್‌ ಪಿಚ್‌ ಮನಸ್ಥಿತಿ ಬಹಳಾ ವೇಗವಾಗಿ ಬದಲಾಗಿದೆ,” ಎಂದು ಮಾಜಿ ಆಲ್‌ರೌಂಡರ್‌ ವ್ಯಂಗ್ಯವಾಡಿದ್ದಾರೆ.

ಎರಡನೇ ದಿನವೂ ಪ್ರಾಬಲ್ಯ ಮೆರೆದ ಭಾರತ

ಎರಡನೇ ದಿನವಾದ ಶನಿವಾರ 7 ವಿಕೆಟ್‌ ಕಳೆದುಕೊಂಡು ಪ್ರಥಮ ಇನಿಂಗ್ಸ್‌ ಮುಂದುವರಿಸಿದ್ದ ಆಸ್ಟ್ರೇಲಿಯಾ ತಂಡ, ಜಸ್‌ಪ್ರೀತ್‌ ಬುಮ್ರಾ ಮಾರಕ ಬೌಲಿಂಗ್‌ ದಾಳಿಗೆ ನಲುಗಿ ಕೇವಲ 104 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆ ಮೂಲಕ ಹಿನ್ನಡೆ ಅನುಭವಿಸಿತ್ತು. ನಂತರ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ್ದ ಭಾರತ ತಂಡ, ಅತ್ಯುತ್ತಮವಾಗಿ ಕಮ್‌ಬ್ಯಾಕ್‌ ಮಾಡಿತ್ತು. ಅತ್ಯಂತ ತಾಳ್ಮೆಯುತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಯಶಸ್ವಿ ಜೈಸ್ವಾಲ್‌ 193 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಏಳು ಬೌಂಡರಿಗಳೊಂದಿಗೆ ಅಜೇಯ 90 ರನ್‌ಗಳನ್ನು ಕಲೆ ಹಾಕಿದ್ದರು. ಇನ್ನು ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ್ದ ಕೆಎಲ್‌ ರಾಹುಲ್‌ 153 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ ಅಜೇಯ 62 ರನ್‌ಗಳನ್ನು ಗಳಿಸಿದ್ದಾರೆ. ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 172 ರನ್‌ಗಳನ್ನು ಗಳಿಸಿದೆ. ಇದರೊಂದಿಗೆ ಭಾರತ ತಂಡ ಎರಡನೇ ದಿನವೂ ಮೇಲುಗೈ ಸಾಧಿಸಿದೆ. ಇನ್ನು ಮೂರನೇ ದಿನವಾದ ಭಾನುವಾರ ದೊಡ್ಡ ಮೊತ್ತವನ್ನು ಕಲೆ ಹಾಕಲು ಭಾರತ ತಂಡ ಎದುರು ನೋಡುತ್ತಿದೆ.