Saturday, 23rd November 2024

IND vs AUS: ನಿರ್ಣಾಯಕ ಅರ್ಧಶತಕ ಸಿಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ ಕೆಎಲ್‌ ರಾಹುಲ್‌!

KL Rahul shuts critics with gutsy fifty in Perth Test vs Australia

ಪರ್ತ್‌: ಆಸ್ಟ್ರೇಲಿಯಾ ಎದುರು ಮೊದಲನೇ ಟೆಸ್ಟ್‌ ಪಂದ್ಯದ (IND vs AUS) ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಭಾರತ ತಂಡ, ದ್ವಿತೀಯ ಇನಿಂಗ್ಸ್‌ನಲ್ಲಿ ಭರ್ಜರಿ ಕಮ್‌ಬ್ಯಾಕ್‌ ಮಾಡಿದೆ. ಟೀಮ್‌ ಇಂಡಿಯಾದ ಓಪನರ್ಸ್‌ ಯಶಸ್ವಿ ಜೈಸ್ವಾಲ್‌ ಹಾಗೂ ಕೆಎಲ್‌ ರಾಹುಲ್‌ ಮುರಿಯದ ಮೊದಲನೇ ವಿಕೆಟ್‌ಗೆ ಅಜೇಯ 172 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 218 ರನ್‌ಗಳನ್ನು ಮುನ್ನಡೆಯನ್ನು ಪಡೆದಿದೆ.

ಅಂದ ಹಾಗೆ ನಾಯಕ ರೋಹಿತ್‌ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಇನಿಂಗ್ಸ್‌ ಆರಂಭಿಸಿದ್ದ ಕನ್ನಡಿಗ ಕೆಎಲ್‌ ರಾಹುಲ್‌ ಪ್ರಥಮ ಇನಿಂಗ್ಸ್‌ನಲ್ಲಿ 26 ರನ್‌ಗಳಿಗೆ ವಿವಾದಾತ್ಮಕವಾಗಿ ವಿಕೆಟ್‌ ಒಪ್ಪಿಸಿದ್ದರು. ಆದರೆ, ಎರಡನೇ ಇನಿಂಗ್ಸ್‌ನಲ್ಲಿ ಕೆಎಲ್‌ ರಾಹುಲ್‌ ತಮ್ಮ ತಾಳ್ಮೆಯ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಪಂದ್ಯದ ಎರಡನೇ ದಿನ ಎದುರಿಸಿದ 153 ಎಸೆತಗಳಲ್ಲಿ ಕನ್ನಡಿಗ ರಾಹುಲ್‌, ನಾಲ್ಕು ಬೌಂಡರಿಗಳೊಂದಿಗೆ ಅಜೇಯ 62 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡಲು ನೆರವು ನೀಡಿದರು.

ಅಂದ ಹಾಗೆ ಕೆಎಲ್‌ ರಾಹುಲ್‌ ಅವರು ಪ್ರಕಸ್ತ ವರ್ಷದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಭಾರತ ಟಿ20ಐ ತಂಡದಲ್ಲಿ ಈಗಾಗಲೇ ಸ್ಥಾನ ಕಳೆದುಕೊಂಡಿರುವ ಅವರುಮ ಏಕದಿನ ತಂಡದಲ್ಲಿಯೂ ಸ್ಥಾನ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಇನ್ನು ಟೆಸ್ಟ್‌ ತಂಡದಲ್ಲಿಯೂ ಅವರು ನಿಯಮಿತವಾಗಿ ಆಡುತ್ತಿಲ್ಲ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯಲ್ಲಿಯೂ ಕೆಎಲ್‌ ರಾಹುಲ್‌ ಎಲ್ಲಾ ಪಂದ್ಯಗಳಲ್ಲಿ ಆಡಿರಲಿಲ್ಲ.

IND vs AUS: ಕಪಿಲ್‌ ದಾಖಲೆ ಸರಿಗಟ್ಟಿದ ಜಸ್‌ಪ್ರೀತ್‌ ಬುಮ್ರಾ

ಟೀಕಾಕಾರರಿಗೆ ಬ್ಯಾಟ್‌ನಿಂದಲೇ ಉತ್ತರ ಕೊಟ್ಟ ರಾಹುಲ್‌

ಇತ್ತೀಚೆಗೆ ತವರಿನಲ್ಲಿ ಬಾಂಗ್ಲಾದೇಶ ವಿರುದ್ದ ಎರಡು ಪಂದ್ಯಗಳ ಟೆಸ್ಟ್‌ ಸರೆಣಿಯಲ್ಲಿ ರಾಹುಲ್‌ ಬ್ಯಾಟಿಂಗ್‌ ವೈಫ್ಯಲ್ಯ ಅನುಭವಿಸಿದ್ದರು. ನಂತರ ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಕೆಎಲ್‌ ರಾಹುಲ್‌ ಬೆಂಚ್‌ ಕಾದಿದ್ದರು. ಆದರೂ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರೆಣಿಯ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಔಟ್‌ ಆಫ್‌ ಫಾರ್ಮ್‌ ರಾಹುಲ್‌ ಅವರ ಆಯ್ಕೆಯನ್ನು ಹಲವು ಮಾಜಿ ಕ್ರಿಕೆಟಿಗರು ಪ್ರಶ್ನೆ ಮಾಡಿದ್ದರು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ನಿರ್ಣಾಯಕ ಅರ್ಧಶತಕ ಸಿಡಿಸುವ ಮೂಲಕ ಟೀಕಾಕಾರರಿಗೆ ತಮ್ಮ ಬ್ಯಾಟ್‌ನಿಂದಲೇ ಉತ್ತರ ನೀಡಿದ್ದಾರೆ.

ಅದರಂತೆ ಆಸ್ಟ್ರೇಲಿಯಾ ಎದುರಿನ ಪರ್ತ್‌ ಟೆಸ್ಟ್‌ನಲ್ಲಿಯೂ ಕೆಎಲ್‌ ರಾಹುಲ್‌ ಬೆಂಚ್‌ ಕಾಯಬೇಕಾಗಿತ್ತು. ಆದರೆ, ನಾಯಕ ರೋಹಿತ್‌ ಶರ್ಮಾ ವೈಯಕ್ತಿಕ ಕಾರಣಗಳಿಂದಾಗಿ ಮೊದಲನೇ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯಶಸ್ವಿ ಜೈಸ್ವಾಲ್‌ ಜತೆ ಇನಿಂಗ್ಸ್‌ ಆರಂಭಿಸಲು ಕೆಎಲ್ ರಾಹುಲ್‌ಗೆ ಅವಕಾಶ ಲಭಿಸಿದೆ.ನಿರೀಕ್ಷೆಯಂತೆ ಸಿಕ್ಕ ಅವಕಾಶವನ್ನು ಕನ್ನಡಿಗ ಕೆಎಲ್‌ ರಾಹುಲ್‌ ಸದುಪಯೋಗಪಡಿಸಿಕೊಂಡಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ 26 ರನ್‌ ಗಳಿಸುವ ಮೂಲಕ ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ ಕನ್ನಡಿಗ 3000 ರನ್‌ಗಳನ್ನು ಪೂರ್ಣಗೊಳಿಸಿದ್ದರು. ದ್ವಿತೀಯ ಇನಿಂಗ್ಸ್‌ನಲ್ಲಿ ಅಜೇಯ 62 ರನ್‌ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಅಡಿಲೇಡ್‌ ಟೆಸ್ಟ್‌ಗೂ ರಾಹುಲ್‌-ಜೈಸ್ವಾಲ್‌ರನ್ನು ಉಳಿಸಿಕೊಳ್ಳಬೇಕೆಂದ ದೊಡ್ಡ ಗಣೇಶ್‌

ಇದಕ್ಕೂ ಮುನ್ನ ಭಾರತ ತಂಡದ ಮಾಜಿ ವೇಗದ ಬೌಲರ್‌ ದೊಡ್ಡ ಗಣೇಶ್‌ ಅವರು, ಟೀಮ್‌ ಇಂಡಿಯಾದ ಅಡಿಲೇಡ್‌ ಟೆಸ್ಟ್‌ಗೂ ಕೆಎಲ್‌ ರಾಹುಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಅವರನ್ನು ಓಪನಿಂಗ್‌ ಬ್ಯಾಟ್ಸ್‌ಮನ್‌ಗಳಾಗಿ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದ್ದರು.

“ಮುಂದಿನ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಬೇಕು ಹಾಗೂ ಯಶಸ್ವಿ ಜೈಸ್ವಾಲ್‌ ಮತ್ತು ಕೆಎಲ್‌ ರಾಹುಲ್‌ ಅವರು ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿಯೇ ಮುಂದುವರಿಯಬೇಕೆಂದು,” ಎಂದು ಕನ್ನಡಿಗ ದೊಡ್ಡ ಗಣೇಶ್‌ ಆಗ್ರಹಿಸಿದ್ದಾರೆ.