Thursday, 12th December 2024

IND vs AUS: ಇನ್ನು ಮುಂದೆ ಕೋಚ್‌ ಗಂಭೀರ್ ಸುದ್ದಿಗೋಷ್ಠಿ ಮಾಡಬಾರದು ಎಂದ ಮಾಜಿ ಆಟಗಾರ

ಮುಂಬಯಿ: ಟೀಮ್‌ ಇಂಡಿಯಾದ(IND vs AUS) ಮುಖ್ಯ ಕೋಚ್ ಗೌತಮ್ ಗಂಭೀರ್(Gautam Gambhir) ಬಗ್ಗೆ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್(Sanjay Manjrekar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಭೀರ್ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಬೇಕು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ ಸೋಮವಾರ ಗಂಭೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು. ಇದು ನ್ಯೂಜಿಲ್ಯಾಂಡ್‌ ಸರಣಿ ಸೋಲಿನ ಬಳಿಕ ಗಂಭೀರ್‌ ಪಾಲ್ಗೊಂಡ ಮೊದಲ ಸುದ್ದಿಗೋಷ್ಠಿಯಾಗಿತ್ತು. ಹೀಗಾಗಿ ಅವರಿಗೆ ಪ್ರಶ್ನೆಗಳ ಸುರಿಮಳೆ ಎದುರಾಗಿತ್ತು. ಎಲ್ಲ ಪ್ರಶ್ನೆಗಳಿಗೂ ಗಂಭೀರ್‌ ಉತ್ತರ ಕೂಡ ನೀಡಿದ್ದರು. ಕಿವೀಸ್‌ ಸೋಲಿನ ವೈಫಲ್ಯವನ್ನು ಕೂಡ ಒಪ್ಪಿಕೊಂಡಿದ್ದರು. ಕೆಲ ಪ್ರಶ್ನೆಗಳಿಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು.

ಗಂಭೀರ್‌ ಸುದ್ದಿಗೋಷ್ಠಿ ನಡೆಸಿದ ಬಳಿಕ ಟ್ವೀಟ್ ಮಾಡಿದ ಸಂಜಯ್ ಮಂಜ್ರೇಕರ್, ‘ಗಂಭೀರ್ ಪಾಲ್ಗೊಂಡ ಸುದ್ದಿಗೋಷ್ಠಿಯನ್ನು ಗಮನಿಸಿದೆ. ಗಂಭೀರ್‌ರನ್ನು ಈ ರೀತಿ ಸುದ್ದಿಗೋಷ್ಠಿಯಿಂದ ಬಿಸಿಸಿಐ ದೂರ ಇಡಬೇಕು. ಅವರು ತೆರೆಮರೆಯಲ್ಲಿ ಕೆಲಸ ಮಾಡಲಿ. ಸುದ್ದಿಗೋಷ್ಠಿಯಲ್ಲಿ ಅವರ ಹೇಳಿಕೆಗಳು ಹಾಗೂ ಆಯ್ಕೆ ಮಾಡುವ ಪದಗಳು ಅಷ್ಟು ಸರಿಯಿಲ್ಲ. ನಾಯಕ ರೋಹಿತ್ ಅಥವಾ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಉತ್ತಮ’ ಎಂದು ಸಂಜಯ್ ತಿಳಿಸಿದ್ದಾರೆ.

ಇದನ್ನೂ ಓದಿ IND vs AUS: ಪರ್ತ್‌ ತಲುಪಿದ ಟೀಮ್‌ ಇಂಡಿಯಾದ ಮೊದಲ ಬ್ಯಾಚ್‌

ತವರಿನ ಬಾಂಗ್ಲಾ ಮತ್ತು ನ್ಯೂಜಿಲ್ಯಾಂಡ್‌ ಎದುರಿನ ಟೆಸ್ಟ್‌ ಸರಣಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದರೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಗ್ಗೆ ಗಂಭೀರ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಇಬ್ಬರೂ ದಿಗ್ಗಜ ಕ್ರಿಕೆಟಿಗರು. ಈಗಲೂ ಅವರಿಬ್ಬರೂ ವಿಶ್ವ ಶ್ರೇಷ್ಠ ಆಟಗಾರರು. ಅವರಿಗೆ ಅವರ ಮೇಲಿರುವ ಜವಾಬ್ದಾರಿಯ ಅರಿವಿದೆ. ಅವರು ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆ ಅಪಾರ. ಅವರು ದೇಶಕ್ಕೆ ಮತ್ತಷ್ಟು ಕೊಡುಗೆ ನೀಡಲಿದ್ದಾರೆ. ಅವರಿಗೆ ಮತ್ತು ಭಾರತ ತಂಡಕ್ಕೆ ತರಬೇತಿ ನೀಡುವುದು ದೊಡ್ಡ ಗೌರವ ಎಂದು ಹೇಳುವ ಮೂಲಕ ಅವರಿಗೆ ಗಂಭೀರ್ ಬೆಂಬಲವಾಗಿ ನಿಂತಿದ್ದಾರೆ.

ಇದೇ ವೇಳೆ ತಮ್ಮ ಮೇಲಿನ ಟೀಕೆಗೆ ಉತ್ತರಿಸಿದ ಗಂಭೀರ್, ನನ್ನ ಮೇಲೆ ಯಾವುದೇ ಒತ್ತಡವೂ ಇಲ್ಲ. ಈ ಹುದ್ದೆ ಒಪ್ಪಿಕೊಳ್ಳುವಾಗಲೇ ನನಗೆ ನಿರೀಕ್ಷೆಗಳ ಬಗ್ಗೆ ಅರಿವಿತ್ತು. ಈ ಸರಣಿ ಬಳಿಕ ಹಾಗಾಗಲಿದೆ, ಹೀಗಾಗಲಿದೆ ಎಂಬ ಮಾಧ್ಯಮಗಳ ವರದಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.